ಬೆಂಗಳೂರು, ಜು.19: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಮಳೆಯ ಅಬ್ಬರಕ್ಕೆ ಜನ ಜೀವನ ಹೈರಾಣಾಗಿದೆ. ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ಉಡುಪಿ, ಕೊಡಗು, ಉತ್ತರ ಕನ್ನಡ, ಹಾವೇರಿ ಮತ್ತಿತರ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮುಂದುವರೆದಿದ್ದು, ಜಲಾಶಯಗಳು ಭರ್ತಿಯಾಗಿವೆ.
ಹಳ್ಳ, ಕೊಳ್ಳಗಳು ತುಂಬಿ ಹೊಲ ಗದ್ದೆಗಳು ಜಲಾವೃತಗೊಂಡಿವೆ. ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಾರಾವಾರ, ಹಾಸನ ಮುಂತಾದೆಡೆ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.
ನಿರಂತರ ಮಳೆಯಿಂದ ಹೆದ್ದಾರಿಯ ಮೇಲೆ ಭಾರಿ ಪ್ರಮಾಣದ ಗುಡ್ಡ ದ ಮಣ್ಣು ಜರದಿದ್ದು ಅದನ್ನು ತೆರವುಗೊಳಿಸಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗುತ್ತಿದೆ.ಚಿಕ್ಕಮಗಳೂರಿನ ಹಲವೆಡೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಶೃಂಗೇರಿಯಲ್ಲಿ ತುಂಗಾ ಪ್ರವಾಹದಿಂದ ಪಟ್ಟಣದಲ್ಲಿ ಹಲವಾರು ರಸ್ತೆಗಳು ಜಲಾವೃತಗೊಂಡಿವೆ. ಗಾಂದಿ ಮೈದಾನ ಭಾರತಿ ತೀರ್ಥ ರಸ್ತೆಯಲ್ಲಿ ಪ್ರವಾಹದ ನೀರು ಎರಡು ದಿನದಿಂದ ನಿಂತಿದೆ. ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣ ತುಂಗಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗುತ್ತಿದೆ.
ನದಿ ಭಾಗದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಶಿವಮೊಗ್ಗದ ಗಾಜನೂರಿನಲ್ಲಿರುವ ತುಂಗಾ ಜಲಾಶಯ ಭರ್ತಿಯಾಗಿದ್ದು, 71 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕರಾವಳಿ ಭಾಗದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಲವು ಕಡೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಚಿಕ್ಕಮಗಳೂರಿನ ಅಂಬಲೆ,ಲಕ್ಯ ಹೋಬಳಿ ಹೊರತುಪಡಿಸಿ ಎಲ್ಲೆಡೆ ಮಳೆ ಜೋರಾಗಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ರಜೆ ನೀಡಲಾಗಿದೆ. ಕೊಡಗಿನಲ್ಲಿ ಕೂಡ ಮಳೆಯ ಅಬ್ಬರ ಮುಂದುವರೆದಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲ, ನಾಪೋಕ್ಲು ಭಾಗದಲ್ಲಿ ನದಿಗಳು ತುಂಬಿ ಹರಿಯುತ್ತಿವೆ. ಕಾವೇರಿ ನದಿಗೆ ಒಳಹರಿವು ಪ್ರಮಾಣ ಹೆಚ್ಚಾಗಿದೆ. ಕಾವೇರಿ ಜಲನಯನ ಪ್ರದೇಶದ ಕಬಿನಿ, ಹೇಮಾವತಿ, ಹಾರಂಗಿ, ಕೃಷ್ಣರಾಜ ಸಾಗರಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಬಿನಿ ಈಗಾಗಲೇ ಭರ್ತಿಯಾಗಿದ್ದು, ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ.