ಬೆಂಗಳೂರು,ಅ.17- ಹಲವಾರು ತಿಂಗಳಿನಿಂದ ಬಾಕಿ ಉಳಿದಿರುವ ಹಣವನ್ನು ಬಿಡುಗಡೆ ಮಾಡದಿದ್ದರೆ ಕಾಂಗ್ರೆಸ್ ಶಾಸಕರ ಕಮೀಷನ್ ಲಂಚದ ಬೇಡಿಕೆಯ ಬಗ್ಗೆ ದಾಖಲೆಗಳ ಸಮೇತ ನ್ಯಾಯಾಲಯಕ್ಕೆ ಹೋಗುವುದಾಗಿ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಎಚ್ಚರಿಕೆ ನೀಡಿದೆ.ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘವು, ಬಿಜೆಪಿ ಅವಧಿಗಿಂತ ಕಾಂಗ್ರೆಸ್ ಅವಧಿಯಲ್ಲೇ ಲಂಚದ ಬೇಡಿಕೆ ಹೆಚ್ಚಾಗಿದೆ ಎಂದು ಆರೋಪಿಸಿದ್ದರು.
ಇದೀಗ ಕಾಂಗ್ರೆಸ್ ಶಾಸಕರು ಶೇ.70ರಷ್ಟು ಕಮೀಷನ್ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಸರ್ಕಾರ ನಿಗದಿತ ಅವಧಿಯೊಳಗೆ ಸರ್ಕಾರ ಬಾಕಿ ಹಣವನ್ನು ಬಿಡುಗಡೆ ಮಾಡದಿದ್ದರೆ ಲಂಚದ ಬೇಡಿಕೆ ಇಟ್ಟಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಇದರ ಬಗ್ಗೆ ನಮ ಬಳಿ ಎಲ್ಲವೂ ಇದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷಿ ನಡೆಸಿದ ಗುತ್ತಿಗೆದಾರರ ಸಂಘದ ಆರ್.ಮಂಜುನಾಥ್ ಅವರು ವಸತಿ ಸಚಿವ ಜಮೀರ್ ಅಹಮದ್ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೂ ದೂರು ನಿಡಿದ್ದೇವೆ. ಎಐಸಿಸಿ ಅಧ್ಯಕ್ಷ ಖರ್ಗೆ ಹಾಗೂ ರಾಹುಲ್ ಗಾಂಧಿಯವರು ಸಮಯ ನೀಡಿದರೆ ಭ್ರಷ್ಟಾಚಾರದ ದಾಖಲೆಗಳನ್ನು ಕೊಡಲು ಸಿದ್ದ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಲಂಚ ಇಲ್ಲ ಎಂದು ನಾನು ಹೇಳುವುದಿಲ್ಲ. ಜೊತೆಗೆ ಕಮೀಷನ್ ಇಲ್ಲ ಎಂದು ಹೇಳುವುದಿಲ್ಲ. ಎಷ್ಟು ಪರ್ಸೆಂಟೇಜ್ ಕಮೀಷನ್ ನಡೆಯುತ್ತಿದೆ ಎಂಬುದನ್ನು ಡಿಸೆಂಬರ್‌ನಲ್ಲಿ ಹೇಳುತ್ತೇವೆ. ಇದು 40% 60% 80% ಎಂಬುದನ್ನು ಮುಂದಿನ ದಿನದಲ್ಲಿ ಹೇಳುತ್ತೇವೆ ಕಾದು ನೋಡಿ ಎಂದು ಕುತೂಹಲ ಕೆರಳಿಸಿದರು.
ಈ ಹಿಂದೆ ಸಿಎಂ ಹಾಗೂ ಡಿಸಿಎಂಗೆ ಬರೆದ ಪತ್ರದಲ್ಲಿ ಹಣ ಬಿಡುಗಡೆ ಮಾಡುವ ವಿಷಯದಲ್ಲಿ ಕಮೀಷನ್ ದುಪ್ಪಟ್ಟಾಗಿದೆ ಎಂದು ಪತ್ರದಲ್ಲಿ ಹೇಳಿದ್ದೆವು. ಸಣ್ಣಪುಟ್ಟ ಗುತ್ತಿಗೆದಾರರು ವಿಷ ಕುಡಿಯುವ ಸ್ಥಿತಿಗೆ ಹೋಗಿದ್ದಾರೆ. ದಯವಿಟ್ಟು ಹಣ ಕೊಡಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ. ನಮ ಕಷ್ಟವನ್ನು ಯಾರಿಗೆ ಹೇಳೋಣ ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ನಂತರ ಅಧಿಕಾರಕ್ಕೇರಿತ್ತು. ನಾವು ಅಧಿಕಾರಕ್ಕೆ ಬಂದರೆ ಗುತ್ತಿಗೆದಾರ ಸಮಸ್ಯೆ ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಆದರೆ ಇನ್ನೂ ಬಾಕಿ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
52 ಸಾವಿರ ಕೋಟಿ ರೂಪಾಯಿ ಬಾಕಿ ಬರಬೇಕಿತ್ತು. ಕೆಲ ಇಲಾಖೆಗಳು ಹಣ ಬಿಡುಗಡೆ ಮಾಡಿದ್ದು, 33 ಸಾವಿರ ಕೋಟಿ ರೂ. ಬಾಕಿ ಇದೆ. ಇನ್ನೊಂದು ತಿಂಗಳು ಕಾಯುತ್ತೇವೆ. ಆಗಲೂ ಹಣ ಬಿಡುಗಡೆಯಾಗಿಲ್ಲ ಎಂದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಚ್ಚರಿಸಿದ್ದಾರೆ.ಎರಡು ವರ್ಷಗಳಿಂದ ಈ ಸರ್ಕಾರದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವೆ. ಐದಾರು ಬಾರಿ ಸಿಎಂ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ರಾಜ್ಯ ಸರ್ಕಾರದಿಂದ 33 ಸಾವಿರ ಕೋಟಿ ಬಾಕಿ ಇದೆ. ಬಿಲ್ ಕ್ಲಿಯರ್ ಮಾಡದಿದ್ದರೆ, ಭ್ರಷ್ಟಾಚಾರದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗಡುವು: ಗುತ್ತಿಗೆಯಲ್ಲಿ ಪ್ಯಾಕೇಜ್ ಸಿಸ್ಟಮ್ ಕೈ ಬಿಡಬೇಕು ಎಂದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಡಿಸೆಂಬರ್ ವರೆಗೂ ಸರ್ಕಾರಕ್ಕೆ ಡೆಡ್ ಲೈನ್ ನೀಡೋದಾಗಿ ಹೇಳಿದ್ದಾರೆ. ನವೆಂಬರ್ ಒಳಗೆ ಎಲ್ಲಾ ಬಿಲ್ ಬಾಕಿ ಬಿಡುಗಡೆಯಾಗಿ ಪಾವತಿಯಾಗಬೇಕು. ಬಾಕಿ ಹಣ ಬಿಡುಗಡೆ ಮಾಡದಿದ್ರೆ ರಾಜ್ಯಪಾಲರು ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾಗೂ ದೂರು ನೀಡುವ ಎಚ್ಚರಿಕೆ ನೀಡಿದ್ದಾರೆ. ನಮ ಸಹನೆಯ ಕಟ್ಟೆ ಹೊಡೆದು ಹೋಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕರ್ನಾಟಕದಲ್ಲಿ ಹೊರ ರಾಜ್ಯದ ಗುತ್ತಿಗೆದಾರರು ತುಂಬಿಕೊಂಡು ಬಿಟ್ಟಿದ್ದಾರೆ. ನಮವರು ಹೊರ ರಾಜ್ಯದ ಗುತ್ತಿಗೆದಾರರಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದಿದ್ದಾರೆ.
ಜಮೀರ್ ಖಾನ್ ಮೇಲೆ ಗಂಭೀರ ಆರೋಪ:
ಸಚಿವ ಜಮೀರ್ ಅಹಮದ್ ಖಾನ್ ಮೇಲೆ ಗುತ್ತಿಗೆದಾರರು ಗಂಭೀರ ಆರೋಪ ಮಾಡಿದ್ದು, ಭ್ರಷ್ಟ ನಿವೃತ್ತ ಇಂಜಿನಿಯರ್‌ರನ್ನು ಕರೆದುಕೊಂಡು ಬಂದು ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ಬಾಲರಾಜ್ ಎಂಬುವರನ್ನು ನೇಮಿಸಿ ಗೋಲಾಲ್ ಮಾಡುತ್ತಿದ್ದಾರೆ. ಆತನ ಮೇಲೆ ಭ್ರಷ್ಟಾಚಾರ ಆರೋಪವಿದ್ದು, ಜಮೀರ್ ಅಹಮದ್ ಅವರ ವಸತಿ ಇಲಾಖೆಯಲ್ಲಿ ಬ್ರಹಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಜಗನ್ನಾಥ ಬಿ ಶೇಗಜಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಲೂ ಕಮಿಷನ್ ನಡೆಯುತ್ತಿದೆ. ಶಾಸಕರಿಗೆ ಹಂಚಿಕೆಯಾಗುವ ಅನುದಾನದಲ್ಲಿ ಕಮಿಷನ್ ಅನ್ನು ಟೆಂಡರ್ ಗೂ ಮುಂಚಿತವಾಗಿ 15 ರಿಂದ 20 ಪರ್ಸೆಂಟ್ ಕಮಿಷನ್ ಕೊಡಬೇಕು. ಇಲ್ಲವೆಂದರೆ ಗುತ್ತಿಗೆದಾರರಿಗೆ ಕೆಲಸ ಕೊಡುವುದಿಲ್ಲ. ಕೆಲ ಶಾಸಕರು ಇನ್ನೂ ಹೆಚ್ಚಾಗಿಯೇ ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ಗುತ್ತಿಗೆದಾರರಿಗೆ ಬಿಡುಗಡೆಯಾಗಬೇಕಿರುವ ಹಣ ಎಷ್ಟು?
- ನೀರಾವರಿ ಇಲಾಖೆ- 12000 ಕೋಟಿ ರೂ.
- ಪಿಆರ್‌ಡಿ ಇಲಾಖೆ- 3600 ಕೋಟಿ ರೂ.
- ಸಣ್ಣ ನೀರಾವರಿ ಇಲಾಖೆ- 3200 ಕೋಟಿ ರೂ.
- ನಗರಾಭಿವೃದ್ಧಿ ಇಲಾಖೆ- 2000 ಕೋಟಿ ರೂ.
- ಮಹಾತ ಗಾಂಧಿ ಯೋಜನೆ- 1600 ಕೋಟಿ ರೂ.
- ಹೌಸಿಂಗ್ ಇಲಾಖೆ 1200 ಕೋಟಿ ರೂ.
- ಕಾರ್ಮಿಕ ಇಲಾಖೆ 800 ಕೋಟಿ ರೂ.
ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಗುತ್ತಿಗೆದಾರರ ಸಂಘಕ್ಕೆ ಸಿಎಂ ತಿರುಗೇಟು
ಕಾಂಗೆ್ರಸ್ ಸರ್ಕಾರದಲ್ಲೂ ಕಾಮಗಾರಿಗಳಿಗೆ ಕಮಿಷನ್ ಪಡೆಯಲಾಗುತ್ತಿದೆ ಎಂಬ ಆರೋಪ ಮಾಡುತ್ತಿರುವ ಗುತ್ತಿಗೆದಾರರ ಸಂಘದವರು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಕಾಂಗ್ರೆಸ್ ಸರ್ಕಾರ ಕೂಡ ಕಮಿಷನ್ ಪಡೆಯುತ್ತಿದೆ ಎಂದು ಹೇಳಿರುವುದಕ್ಕೆ ಸಿಡಿಮಿಡಿ ವ್ಯಕ್ತಪಡಿಸಿದರು. ಅಂಥಹ ಆರೋಪಗಳಿದ್ದರೆ, ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿ, ಗುತ್ತಿಗೆದಾರರಿಂದ ಈ ರೀತಿಯ ಆರೋಪಗಳನ್ನು ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಇನ್ಫೋಸಿಸ್‌ನ ನಾರಾಯಣಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡದೆ ಇರುವುದು ಅವರಿಗೆ ಸೇರಿದ ವಿಷಯ. ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಮೇಲ್ಜಾತಿಯವರು ಫಲಾನುಭವಿಗಳಿಲ್ಲವೇ? ಎಂದು ಪ್ರಶ್ನಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತವೆಂಬ ತಪ್ಪು ಕಲ್ಪನೆ ಮೂಡಿಸಬಾರದು, ಬಹುಶಃ ನಾರಾಯಣ ಮೂರ್ತಿಯವರಿಗೆ ಯಾರೋ ತಪ್ಪು ಮಾಹಿತಿ ನೀಡಿರಬಹುದು. ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿಯವರು ಬೃಹಸ್ಪತಿಯಲ್ಲ. ಅವರಿಗೆ ಸಮೀಕ್ಷೆಯ ಉದ್ದೇಶ ಅರ್ಥವಾಗದೆ ಇದ್ದರೆ ನಾವೇನೂ ಮಾಡಲಾಗುವುದಿಲ್ಲ ಎಂದರು.ಇದು ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲ. ರಾಜ್ಯದ 7 ಕೋಟಿ ಜನರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಪದೇಪದೇ ಜಾಹೀರಾತುಗಳ ಮೂಲಕ, ಸಚಿವರು ಹಾಗೂ ತಾವು ಹೇಳಿಕೆಗಳನ್ನು ನೀಡುವ ಮೂಲಕ ಈ ಬಗ್ಗೆ ಸ್ಪಷ್ಟಪಡಿಸಿದ್ದೇವೆ. ಹಾಗಿದ್ದರೂ ನಾರಾಯಣ ಮೂರ್ತಿಯಂಥವರು, ಸುಧಾಮೂರ್ತಿಯಂಥವರು ಹಿಂದುಳಿದವರ ಸಮೀಕ್ಷೆ ಎಂಬ ಭಾವನೆಯಲ್ಲಿದ್ದರೆ ಅದು ತಪ್ಪು ಎಂದರು.
ಕೇಂದ್ರ ಸರ್ಕಾರ ಜಾತಿ ಸಮೀಕ್ಷೆ ನಡೆಸಲಿದೆ. ಆಗ ಇವರು ಯಾವ ಉತ್ತರ ನೀಡುತ್ತಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಬಂಡವಾಳ ಹೂಡಿಕೆದಾರರು ತಮ ಇಷ್ಟವಾದ ಜಾಗಗಳಲ್ಲಿ ಉದ್ಯಮಗಳನ್ನು ಆರಂಭಿಸುತ್ತಾರೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂ-1 ಸ್ಥಾನದಲ್ಲಿದೆ. ಐ ಫೋನ್ ತಯಾರಿಕೆಯ ಕಂಪನಿ ಕರ್ನಾಟಕದಲ್ಲಿ ಆರಂಭವಾಗಿದೆ. ಆಂಧ್ರಪ್ರದೇಶಕ್ಕೆ ಏಕೆ ಹೋಗಿಲ್ಲ ಎಂದರೆ ಇದಕ್ಕೆ ಉತ್ತರ ಇರುತ್ತದೆಯೇ? ಎಂದು ಪ್ರಶ್ನಿಸಿದ ಅವರು, ರಾಜ್ಯ ಉದ್ಯಮ ಸ್ನೇಹಿ ವಾತಾವರಣ ಹೊಂದಿದೆ ಎಂದು ಹೇಳಿದರು.
5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಹೇಳಿಕೆ ನೀಡಿರುವವರಿಂದಲೇ ಸ್ಪಷ್ಟನೆ ಕೇಳಿ ಎಂದರು.ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ ಗೆಲ್ಲುವ ವಿಶ್ವಾಸವಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ಪಾದ ಯಾತ್ರೆಗೆ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಡಳಿತ ವ್ಯವಸ್ಥೆಯ ಬದಲಾವಣೆಗೂ ಕೂಡ ಜನ ಆಸಕ್ತಿ ತೋರಿಸಿದ್ದಾರೆ. ಇದನ್ನೆಲ್ಲಾ ನೋಡಿದರೆ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆಯಿದೆ. ಪ್ರಚಾರಕ್ಕೆ ತಮನ್ನು ಕರೆದರೆ ಅಲ್ಲಿಗೆ ಹೋಗುವುದಾಗಿ ಹೇಳಿದರು.
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ, ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕರ್ನಾಟಕದಲ್ಲಿ ಯಾವ ಕ್ರಾಂತಿಯೂ ಆಗುವುದಿಲ್ಲ, ಭ್ರಾಂತಿಯೂ ಆಗುವುದಿಲ್ಲ. ಕೆಲಸ ಇಲ್ಲದೇ ಇರುವವರು ಈ ವಿಚಾರವನ್ನು ಚರ್ಚೆ ಮಾಡುತ್ತಾರೆ ಎಂದರು.
ಕ್ರಾಂತಿ ಎಂದರೆ ಏನು? ರಾಜ್ಯದಲ್ಲಿ ಅಂತಹ ಯಾವ ವಾತಾವರಣ ಇದೆ? ಎಂದು ಪ್ರಶ್ನಿಸಿದ ಅವರು, ಅಧಿಕಾರ ಬದಲಾವಣೆ ಎಂಬುವುದು ಕ್ರಾಂತಿಯಲ್ಲ ಎಂದರು.ಸರ್ಕಾರಿ ಶಾಲೆಗಳಲ್ಲಿ ಆಟದ ಮೈದಾನಗಳಲ್ಲಿ, ಪಾರ್ಕ್‌ಗಳಲ್ಲಿ, ಸರ್ಕಾರದ ಜಾಗಗಳಲ್ಲಿ ಅನುದಾನಿತ ಶಾಲೆಗಳಲ್ಲಿ, ಆರ್‌ಎಸ್‌ಎಸ್ ಮಾತ್ರವಲ್ಲ, ಯಾವುದೇ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೂ ಅವಕಾಶವಿಲ್ಲ ಎಂದು ನಿನ್ನೆ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದು ಹಿಂದಿನ ಸರ್ಕಾರವೇ ತೆಗೆದುಕೊಂಡ ನಿರ್ಧಾರವೇ ಎಂದರು.