ಬೆಂಗಳೂರು, ಜು.27– ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮಾಜಿ ಸೈನಿಕರಿಗೆಂದು ಹಂಚಿಕೆ ಮಾಡಲಾದ ನಿವೇಶನಗಳು ವಿವಾದಕ್ಕೀಡಾಗಿದ್ದು, ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಜಿ ಸೈನಿಕರಿಗಾಗಿ ರಾಜೀವ್‌ಗಾಂಧಿ ವಸತಿ ನಿಗಮದಿಂದ 142 ನಿವೇಶನಗಳನ್ನು ನಿರ್ಮಿಸಲಾಗಿತ್ತು.
ಅವುಗಳಲ್ಲಿ 127 ನಿವೇಶನಗಳನ್ನು 2023ರಲ್ಲಿ ಮಾಜಿ ಸೈನಿಕರಿಗೆ ಹಂಚಿಕೆ ಮಾಡಲಾಗಿದೆ. ಹಂಚಿಕೆ ಪತ್ರದಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ್ ಬೊಮಾಯಿ ಹಾಗೂ ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಅವರ ಹೆಸರು ಮತ್ತು ಭಾವಚಿತ್ರಗಳಿವೆ.
ನಿವೇಶನ ಪಡೆದವರ ಪೈಕಿ ಶೇಖ್‌ಹಿಬ್ರಾಹಿಂ, ಮಾಜಿ ಸೈನಿಕ ಮಣಿವಣ್ಣನ್‌ನವರ ಪತ್ನಿ ರಾಜೇಶ್ವರಿ ಹಾಗೂ ಮತ್ತೊಬ್ಬ ಫಲಾನುಭವಿ ತಮ ನಿವೇಶನಗಳಲ್ಲಿ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ.
ನಿವೇಶನ ಹಂಚಿಕೆ ಮಾಡಿದ ಬೊಮಾಯಿ ಸರ್ಕಾರ ಅವುಗಳನ್ನು ನೊಂದಣಿ ಮಾಡಿ, ಖಾತೆ ಮಾಡಿಕೊಟ್ಟಿಲ್ಲ. ಈ ನಡುವೆ ನಿವೇಶನ ಹಂಚಿಕೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ. ಸರ್ಕಾರದ ಅಧಿಸೂಚನೆ ಉಲ್ಲಂಘಿಸಿ, ಅನ್ಯರಾಜ್ಯದವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೆಳಿ ಬಂದಿದೆ.
ನಿಯಮಗಳ ಅನುಸಾರ ಆಯಾ ರಾಜ್ಯಗಳಲ್ಲಿ ಜನಿಸಿ, ಸೇನೆ ಸೇರಿ ಸೇವೆ ಸಲ್ಲಿಸಿದವರಿಗೆ ಆಯಾ ತವರು ರಾಜ್ಯದಲ್ಲಿ ನಿವೇಶನ ಹಂಚಬೇಕು. ಬೇರೆ ರಾಜ್ಯಗಳಿಂದ ಬಂದು ವಾಸ ಮಾಡುವವರನ್ನು ಪರಿಗಣಿಸಬಾರದು ಎಂಬ ನಿಯಮ ಇದೆ. ಅದನ್ನು ಉಲ್ಲಂಘಿಸಿ ಅನ್ಯ ರಾಜ್ಯದವರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಕೆಲ ಮಾಜಿ ಸೈನಿಕರು ಲೋಕಾಯುಕ್ತದಲ್ಲಿ ದಾವೆ ಹೂಡಿದ್ದಾರೆ.
ಈ ಪ್ರಕರಣದ ವಿಚಾರಣೆ ಹಂತದಲ್ಲಿದ್ದು, ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಲೋಕಾಯುಕ್ತ ಮಧ್ಯಂತರ ಆದೇಶ ನೀಡಿದೆ. ಹೀಗಾಗಿ ಮೂವರು ಮಾಜಿ ಸೈನಿಕರ ಕುಟುಂಬದವರು ತಮ ನಿವೇಶನಗಳಲ್ಲಿ ನಿರ್ಮಿಸಲಾಗಿದ್ದ ಕಾಂಪೌಂಡ್‌ಗಳನ್ನು ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ನಿವೇಶನ ಪಡೆದ ಮಾಜಿ ಸೈನಿಕರ ಕುಟುಂಬ ಪಂಚಾಯಿತಿ ಅಧಿಕಾರಿಗಳ ನಡವಳಿಕೆಗಳ ಗೊಂದಲ ಹಾಗು ಆತಂಕಕ್ಕೆ ಸಿಲುಕಿದೆ. ನಿವೇಶನ ಹಂಚಿಕೆಯಲ್ಲಿ ನಿಯಮ ಉಲ್ಲಂಘನೆಯಾಗಿರುವ ಆರೋಪಗಳು ಈಗ ಚರ್ಚೆಗೆ ಗ್ರಾಸವಾಗಿದ್ದು, ಬಸವರಾಜ್ ಬೊಮಾಯಿ ಅವರ ಸರ್ಕಾರದ ನಿರ್ಧಾರ ಪರಿಶೀಲನೆಗೊಳಪಡುತ್ತಿದೆ. ಲೋಕಾಯುಕ್ತ ಅಂತಿಮ ತೀರ್ಪು ನೀಡಿದ ಬಳಿಕ ನಿವೇಶನಗಳನ್ನು ಫಲಾನಿಭವಿಗಳಿಗೆ ನೊಂದಣಿ ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
- ಬೆಂಗಳೂರು : ಟೆಕ್ಕಿ ಮನೆಯಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
- ಕುಡುಕ ಗಂಡನ ಕಾಟ ಮತ್ತು ಬಡತನಕ್ಕೆ ಬೇಸತ್ತು ಮೂವರು ಹೆಣ್ಣು ಮಕ್ಕಳಿಗೆ ವಿಷವಿಟ್ಟು ಕೊಂದ ತಾಯಿ
- SHOCKING : ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಕೋಟ್ಯಂತರ ರೂ. ಬೆಲೆಯ ಮಾದಕ ವಸ್ತು ವಶ
- ಅಮೆರಿಕದಲ್ಲಿ 11 ಮಂದಿಗೆ ಇರಿದ ಯುವಕ, 6 ಜನರ ಸ್ಥಿತಿ ಗಂಭೀರ
- ರಾಜ್ಯದಲ್ಲಿ ಗೊಬ್ಬರ ಅಭಾವ : ನಾಳೆಯಿಂದ ಬಿಜೆಪಿ ಹೋರಾಟ