Friday, August 22, 2025
Homeರಾಜ್ಯಶೇ.5.5 ರಷ್ಟು ಶುಲ್ಕದೊಂದಿಗೆ ಬೆಂಗಳೂರಿನಲ್ಲಿರುವ 'ಬಿ' ಖಾತೆಗಳನ್ನು 'ಎ' ಖಾತೆಗಳಾಗಿ ಪರಿವರ್ತನೆ : ಡಿಕೆಶಿ

ಶೇ.5.5 ರಷ್ಟು ಶುಲ್ಕದೊಂದಿಗೆ ಬೆಂಗಳೂರಿನಲ್ಲಿರುವ ‘ಬಿ’ ಖಾತೆಗಳನ್ನು ‘ಎ’ ಖಾತೆಗಳಾಗಿ ಪರಿವರ್ತನೆ : ಡಿಕೆಶಿ

Conversion of 'B' Khatas in Bengaluru to 'A' Khata with a fee of 5.5%: DK Shivakumar

ಬೆಂಗಳೂರು, ಆ.22- ರಾಜಧಾನಿ ಬೆಂಗಳೂರಿನಲ್ಲಿರುವ 7.5 ಲಕ್ಷ ಬಿ ಖಾತೆಗಳನ್ನು ಶೇ.5.5 ರಷ್ಟು ಹಣ ಕಟ್ಟಿಸಿಕೊಂಡು ಎ ಖಾತೆಗಳನ್ನಾಗಿ ಪರಿವರ್ತಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ರಾಜ್ಯದ ಅಭಿವೃದ್ಧಿ ಮತ್ತು ಅನುದಾನ ಹಂಚಿಕೆಯ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಡೆವಲಪರ್‌ ಗಳು ನಿವೇಶನಗಳನ್ನು ಮಾತ್ರ ಭೂ ಪರಿವರ್ತನೆ ಮಾಡುತ್ತಿರುತ್ತಾರೆ. ರಸ್ತೆಗಳು ಹಾಗೂ ಇತರ ಜಾಗಗಳು ಜಮೀನಿನ ಮೂಲ ಮಾಲೀಕರ ಹೆಸರಿನಲ್ಲೇ ಇರುತ್ತವೆ, ಇದರಿಂದ ಆಸ್ತಿ ತಗಾದೆಗಳು ಹೆಚ್ಚಾಗಿ ನಿವೇಶನ ಖರೀದಿಸಿದವರಿಗೆ ತೊಂದರೆಯಾಗುತ್ತಿತ್ತು.

ತಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರಿನಲ್ಲಿ ಎಲ್ಲ ರಸ್ತೆಗಳನ್ನು ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಿದ್ದೇವೆ. 7.5 ಲಕ್ಷ ಬಿ ಖಾತೆಗಳನ್ನು ಅಭಿವೃದ್ಧಿ ಶುಲ್ಕ ಪಡೆದುಕೊಂಡು ಎ ಖಾತೆಗಳನ್ನಾಗಿ ಪರಿವರ್ತಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಸಭಾಧ್ಯಕ್ಷ ಸ್ಥಾನದಲ್ಲಿದ್ದ ಉಪಾಧ್ಯಕ್ಷರಾದ ರುದ್ರಪ್ಪ ಲಂಮಾಣಿ, ಗ್ರಾಮೀಣ ಭಾಗದಲ್ಲೂ ಸಾಕಷ್ಟು ಸಮಸ್ಯೆಗಳಾಗಿವೆ ಎ ಖಾತೆ, ಬಿ ಖಾತೆ ಗೊಂದಲ ಬಗೆಹರಿಸಿ ಎಂದು ಸಲಹೆ ನೀಡಿದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಮಧ್ಯ ಪ್ರವೇಶಿಸಿ ಪುರಸಭೆ, ನಗರಸಭೆಗಳಲ್ಲೂ ಬಿ ಖಾತೆ ವಿತರಣೆಗೆ ಸಚಿವ ಈಶ್ವರ್‌ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ನೋಂದಣಿ ಆಗಿರುವ ಆಸ್ತಿಗಳಿಗೆ ಬಿ ಖಾತೆ ನೀಡಲು ಮತ್ತು ಕಟ್ಟಡ ನಿರ್ಮಾಣ ನಕ್ಷೆ ಮಂಜೂರು ಮಾಡಲು ಕಾನೂನು ಇಲಾಖೆಯ ಅಭಿಪ್ರಾಯ ಕೇಳಲಾಗಿದೆ. ಅಲ್ಲಿಂದ ಸಲಹೆ ಬಂದ ಬಳಿಕ ಬಿ ಖಾತಾ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಉತ್ತರ ನೀಡುವುದನ್ನು ಮುಂದುವರಿಸಿದ ಡಿ.ಕೆ.ಶಿವಕುಮಾರ್‌, ನಗರ ಸ್ಥಳೀಯ ಸಂಸ್ಥೆಗಳಷ್ಟೇ ಅಲ್ಲ ಪಂಚಾಯ್ತಿಗಳ ಮಟ್ಟದಲ್ಲೂ ಬಿ ಖಾತಾ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಬೆಂಗಳೂರಿನ ಅಭಿವೃದ್ಧಿಯ ವಿಷಯದಲ್ಲಿ ಮಹತ್ವದ ಸುಧಾರಣೆಗಳನ್ನು ತರಲಾಗುತ್ತಿದೆ. ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ನಗರದಲ್ಲಿ 25 ಲಕ್ಷ ಆಸ್ತಿಗಳಿದ್ದು ಎಲ್ಲದಕ್ಕೂ ಆಧಾರ್‌ಸಂಖ್ಯೆಯನ್ನು ಜೋಡಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೋಂದಣಿಗೂ ಆಧಾರ್‌ ಜೋಡಣೆ ಕಡ್ಡಾಯವಾಗಿದೆ ಎಂದರು.

ಇ- ಖಾತೆ ಆಂದೋಲನ ಈಗಲೂ ನಡೆಯುತ್ತಿದೆ. ಕಳೆದ ಜುಲೈನಿಂದ ನಡೆಯುತ್ತಿರುವ ಇ- ಖಾತಾ ಆಂದೋಲನದಲ್ಲಿ ಈವರೆಗೂ 7.2 ಲಕ್ಷ ಖಾತೆಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮನೆ ಮಾಲೀಕರ ಬಾಗಿಲಿಗೆ ಇ- ಖಾತೆ ತಲುಪಿಸುತ್ತೇವೆ ಎಂದು ಹೇಳಿದರು.ಹಿಂದೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಲೋಪಗಳಾಗಿದ್ದವು. ಅದನ್ನು ಸರಿಪಡಿಸಲು ತೆರಿಗೆ ವ್ಯವಸ್ಥೆಯನ್ನು ಕಂಪ್ಯೂಟರೀಕರಣ ಗೊಳಿಸಿ, ಸೋರಿಕೆಯನ್ನು ತಡೆಗಟ್ಟುತ್ತೇವೆ ಎಂದರು.ಈ ದಾಖಲಾತಿಗಳಲ್ಲಿ ಕಂಪ್ಯೂಟರೀಕೃತ ದಾಖಲಾತಿಗಳಲ್ಲಿ ಕಟ್ಟಡದ ಫೋಟೋ ಮತ್ತು ಮಾಲೀಕರ ಫೋಟೋಗಳನ್ನು ಅಳವಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಯಾರೂ ಕೂಡ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಲು ಸಾಧ್ಯವಿಲ್ಲ ಎಂದರು.

ಮನೆ ನಿರ್ಮಾಣಕ್ಕೆ ಮುಂದಾಗುವವರಿಗೆ ಅನಗತ್ಯ ಕಿರುಕುಳಗಳಾಗುತ್ತಿವೆ. ಅದನ್ನು ತಪ್ಪಿಸಲು 50×80 ಅಡಿ ವಿಸ್ತೀರ್ಣದ ನಿವೇಶನಗಳ ವರೆಗೆ ಎಂಪ್ಯಾನಲ್‌ ಎಂಜಿನಿಯರ್ಸ್‌, ಆರ್ಕಿಟೆಕ್ಟ್‌‍ಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅವರು ದೃಢೀಕೃತ ನಕ್ಷೆಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ ಕಟ್ಟಡ ನಿರ್ಮಾಣಕ್ಕೆ ನಂಬಿಕೆ ನಕ್ಷೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈವರೆಗೂ 9 ಸಾವಿರ ಪ್ಲಾನ್‌ಗಳನ್ನು ಮಂಜೂರು ಮಾಡಲಾಗಿದೆ ಎಂದರು.

ಆಸ್ತಿ ತೆರಿಗೆ ಪಾವತಿಸದವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗಿತ್ತು. ಏಕ ತೀರುವಳಿ ವ್ಯವಸ್ಥೆಯನ್ನು ಜಾರಿಗೊಳಿಸಿ ಬಡ್ಡಿ ಮನ್ನಾ ಮಾಡಿದ್ದರಿಂದ 2.60 ಲಕ್ಷ ಮನೆ ಮಾಲೀಕರು ತೆರಿಗೆ ಪಾವತಿಸಿದ್ದಾರೆ. ಇದರಿಂದ ಸರ್ಕಾರಕ್ಕೆ 1200 ಕೋಟಿ ರೂ.ಗಳ ಹೆಚ್ಚುವರಿ ತೆರಿಗೆ ವಸೂಲಿಯಾಗಿದೆ ಎಂದರು.

ಟಿಡಿಆರ್‌ ದುರ್ಬಳಕೆ ಮಾಡಿಕೊಳ್ಳುವ ಪ್ರಸಂಗಗಳು ಹೆಚ್ಚಾಗಿದ್ದವು. ರಾಮನಗರದಲ್ಲಿನ ಕಟ್ಟಡಕ್ಕೆ ಬೆಂಗಳೂರಿನಲ್ಲಿ ಟಿಡಿಆರ್‌ ಪಡೆಯುವ ಪ್ರಯತ್ನಗಳಾಗಿದ್ದವು. ಒಂದೇ ರಸ್ತೆಯಲ್ಲಿರುವ ನಿವೇಶನ, ಮನೆ ಹಾಗೂ ಅಭಿವೃದ್ಧಿ ಪಡಿಸದೆ ಇರುವ ಜಾಗಗಳಿಗೆ ಬೇರೆ ಬೇರೆ ರೀತಿಯ ಟಿಡಿಆರ್‌ ಇತ್ತು ಅದನ್ನು ಸರಳಿಕರಣ ಗೊಳಿಸಲಾಗಿದೆ ಎಂದು ತಿಳಿಸಿದರು.

RELATED ARTICLES

Latest News