ಬೆಂಗಳೂರು, ಮೇ 9-ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ಮಾಜಿ ಸಚಿವ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾಯಿತ ಪ್ರತಿನಿಧಿಯಾಗಿದ್ದ ಜಿ. ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಜನಾರ್ದನರೆಡ್ಡಿ ಅವರ ಶಾಸಕಸ್ಥಾನ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಸದಸ್ಯ ಸ್ಥಾನ ತೆರವಾಗಿದೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಬಿಐ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿರುವ ಮೇ 6ರಿಂದ ಜಾರಿಗೆ ಬರುವಂತೆ ಜನಾರ್ದನರೆಡ್ಡಿ ಅವರು ವಿಧಾನಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ. ಸಿಬಿಐ ನ್ಯಾಯಾಲಯದ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಗುವವರೆಗೂ ಶಾಸಕತ್ವದ ಅನರ್ಹತೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
1951ರ ಪ್ರಜಾ ಪ್ರತಿನಿದಿ ಕಾಯ್ದೆಯ ಸೆಕ್ಷನ್ 8ರ ಹಾಗೂ ಭಾರತ ಸಂವಿಧಾನದ ವಿಧಿ 191(1) (ಇ)ನಿಬಂಧನೆಗಳ ಪ್ರಕಾರ ಜನಾರ್ದನ ರೆಡ್ಡಿ ಅವರು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರವೂ 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಅಲ್ಲಿಯವರೆಗೆ ಶಾಸಕತ್ವದ ಅನರ್ಹತೆಯು ಮುಂದುವರಿಯುತ್ತದೆ.
ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಿ. ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿ ವಿಶೇಷ ಕೋರ್ಟ್ ಮೇ 6ರಂದು ತೀರ್ಪು ನೀಡಿತ್ತು.