ಬೆಂಗಳೂರು,ಅ.1-ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಸಾಕಷ್ಟು ಭ್ರಷ್ಟಚಾರದ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಇದನ್ನು ಸೂಪರ್ ಸೀಡ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರ ಅವಧಿಯಲ್ಲಿ ಹಣಕಾಸು ಅವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ತನಿಖೆಗೆ ಆದೇಶಿಸಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕಿಂತ ಮುನ್ನ ಈ ತನಿಖೆ ನಡೆಯಲಿದ್ದು, ಸಹಕಾರ ಇಲಾಖೆಯ ಜಂಟಿ ನಿಬಂಧಕರು ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಲಿದ್ದಾರೆ.
ಉಪ ನಿಯಮಗಳ ತಿದ್ದುಪಡಿ, ಪದಾಧಿಕಾರಿಗಳಿಗೆ ಅಕ್ರಮ ನೋಟಿಸ್ ಜಾರಿ, ಸರ್ಕಾರಿ ಅನುದಾನ ಹಾಗೂ ಇತರ ಅನುದಾನಗಳ ದುರ್ಬಳಕೆ,ವಾಹನ ಖರೀದಿ ಮತ್ತು ಮಾರಾಟದಲ್ಲಿ ಅವ್ಯವಹಾರ,ಸಿಸಿಟಿವಿ ಅಳವಡಿಕೆ ಮತ್ತು ಅಗ್ನಿಶಾಮಕ ಯಂತ್ರಗಳ ಖರೀದಿಯಲ್ಲಿ ಲೋಪಗಳು, ಅಧ್ಯಕ್ಷರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹಣ ದುರುಪಯೋಗ ಸೇರಿದಂತೆ ಕೆಲವು ಗುರುತರವಾದ ಆರೋಪಗಳು ಕೇಳಿ ಬಂದಿವೆ.
ಹೀಗಾಗಿ ಸರ್ಕಾರ ಸಾಹಿತ್ಯ ಪರಿಷತ್ ಅನ್ನು ಸೂಪರ್ ಸೀಡ್ ಮಾಡಿ ದಿನನಿತ್ಯದ ಕಾರ್ಯನಿರ್ವಾಹಣೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಸರ್ಕಾರ ಸೂಪರ್ ಸೀಡ್ ಮಾಡಿದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡಿಗರ ಆಸಿತಿಯಂತಿರುವ ಸಾಹಿತ್ಯ ಪರಿಷತ್ ಸರ್ಕಾರದ ನಿಯಂತ್ರಣಕ್ಕೆ ಒಳಪಡಲಿದೆ. ಒಂದು ಬಾರಿ ಆಡಳಿತಾಧಿಕಾರಿ ನೇಮಕ ಮಾಡಿದರೆ, ಹಾಲಿ ಇರುವ ಸಮಿತಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಸಾಹಿತ್ಯ ಪರಿಷತ್ ಸುಧಾರಣೆಯಾಗಬೇಕು ಎಂದು ಕೆಲವು ಸಾಹಿತಿಗಳು ಒತ್ತಾಯಿಸಿದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಈಗಾಗಲೇ ಕೆಲವರು ಮಹೇಶ್ ಜೋಶಿ ಅವರ ಧೋರಣೆಯನ್ನು ಖಂಡಿಸಿ ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ಪದನಿ ನಾಗರಾಜು ಅವರು ತಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಪ್ರಕರಣವೇನು: ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಪತ್ರಕರ್ತ ಮತ್ತು ಲೇಖಕ ಜಾಣಗೆರೆ ವೆಂಕಟರಾಮಯ್ಯ ಹಾಗೂ ಲೇಖಕಿ ಡಾ.ವಸುಂಧರಾ ಭೂಪತಿ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ರದ್ದುಪಡಿಸಿ ಸಹಕಾರ ಸಂಘಗಳ ಉಪನಿಬಂಧಕರು 2025ರ ಜೂನ್ 27ರಂದು ಆದೇಶ ಹೊರಡಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ರದ್ದುಪಡಿಸಿ ಹಾಗೂ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ 2ನೇ ವಲಯ ಬೆಂಗಳೂರು ನಗರ ಜಿಲ್ಲಾ ಇವರು 2025ರ ಜೂನ್ 26 ಹಾಗೂ 30ರಂದು ಹೊರಡಿಸಿರುವ ಆದೇಶಗಳನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.
ಎನ್.ಹನುಮೇಗೌಡ ಹಾಗೂ ಇತರರು ನೀಡಿದ ದೂರಿನ ಹಿನ್ನೆಲೆಯಲ್ಲಿ, 2023-24ರಿಂದ ಇಲ್ಲಿವರೆಗೆ ಪರಿಷತ್ತು ಅನುಮೋದಿಸಿರುವ ತಿದ್ದುಪಡಿಗಳು, ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪರಿಷತ್ತಿನ ಅಧ್ಯಕ್ಷರು ನಿಯಮಬಾಹಿರವಾಗಿ ನೀಡಿರುವ ನೋಟಿಸ್‌ಗಳು, 2023-24ನೇ ಸಾಲಿನಲ್ಲಿ ಪರಿಷತ್ತಿಗೆ ಸಂಗ್ರಹವಾಗಿರುವ ಆದಾಯವನ್ನು ದುರುಪಯೋಗ ಪಡಿಸಿಕೊಂಡಿರುವುದು, ಈ ಅವಧಿಯಲ್ಲಿನ ಖರೀದಿ ಮತ್ತು ಮಾರಾಟದಲ್ಲಿ ಆಗಿರುವ ಅವ್ಯವಹಾರ ಮತ್ತಿತ್ತರ ವಿಷಯಗಳನ್ನು ಪರಿಶೀಲಿಸಿ, ಸೂಕ್ತ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಕ ಮಾಡಿ, ಜೂನ್ 30ರಂದು ಆದೇಶ ಹೊರಡಿಸಲಾಗಿತ್ತು. ಈ ಆದೇಶಗಳನ್ನು ರದ್ದುಪಡಿಸಬೇಕು ಎಂದು ಮಹೇಶ್ ಜೋಶಿ ಅರ್ಜಿ ಸಲ್ಲಿಸಿದ್ದರು.
ಬೈಲಾ ತಿದ್ದುಪಡಿಗೆ ವಿರೋಧ: ಕನ್ನಡ ಸಾಹಿತ್ಯ ಪರಿಷತ್‌ನ ಆಡಳಿತ, ಪ್ರತಿನಿತ್ಯದ ಕಾರ್ಯಚಟುವಟಿಕೆ, ಸಾಹಿತ್ಯ ಸಮೇಳನ ಪರಿಣಾಮಕಾರಿ ಯಾಗಿ ನಡೆಯುವ ಉದ್ದೇಶದಿಂದ ಬೈಲಾದಲ್ಲಿ ತಿದ್ದುಪಡಿ ತರಲು ಪರಿಷತ್ತು ಉದ್ದೇಶಿಸಿತ್ತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಪಾಚ್ಚಾಪುರೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯ ಶಿಾರಸ್ಸಿನ ಅನುಸಾರ ಈಗ ಬೈಲಾ ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ.ಇದಕ್ಕೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮೂರನೇ ಬಾರಿಗೆ ಬೈಲಾ ತಿದ್ದುಪಡಿ ತರುತ್ತಿದ್ದು, ಸಾಹಿತ್ಯ ಸಮೇಳನ ಸುಸೂತ್ರವಾಗಿ ನಡೆಯಲು ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರು ತಾವೇ ನೇರವಾಗಿ ಅಥವಾ ಮಾರ್ಗಸೂಚಿ ಉಪಸಮಿತಿಯನ್ನು ರಚಿಸಿ, ಮಾರ್ಗಸೂಚಿಗಳನ್ನು ಹೊರಡಿಸಬಹುದಾಗಿದೆ. ಹೀಗೆ ರಚಿಸಿದ ಮಾರ್ಗಸೂಚಿಗಳನ್ನು ಸಮೇಳನ ನಡೆಯುವ ಜಿಲ್ಲೆಯ ಜಿಲ್ಲಾಡಳಿತ ಮತ್ತು ಸರ್ಕಾರದ ವಿವಿಧ ಇಲಾಖೆಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ.ಈ ಹಿಂದೆ 2022ರಲ್ಲಿ ಪರಿಷತ್ತಿನ ಬೈಲಾದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿತ್ತು. 2023ರಲ್ಲಿ ಎರಡನೇ ಬಾರಿ ತಿದ್ದುಪಡಿ ಮಾಡಲಾಗಿತ್ತು.