ಟಿ.ನರಸೀಪುರ, ಫೆ.9- ನಾಳೆಯಿಂದ ಮೂರು ದಿನಗಳ ಕಾಲ ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ನಡೆಯುವ 13ನೇ ಕುಂಭಮೇಳಕ್ಕೆ ಸಿದ್ಧತೆ ಬಹುತೇಕ ಪೂರ್ಣ ಗೊಂಡಿದೆ. ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಯಾಗ ಮಂಟಪ,ಆದಿ ಚುಂಚನಗಿರಿ ಮಂಟಪದ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಿಟೀಲು ಚೌಡಯ್ಯ ವೃತ್ತದ ಬಳಿ ಧಾರ್ಮಿಕ ಸಭೆ ಆಯೋಜಿಸಲು ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
12ರಂದು ನಡೆಯುವ ಪುಣ್ಯಸ್ನಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ನದಿಯಲ್ಲಿ ಸಾರ್ವಜನಿಕರು ಹಾಗೂ ಗಣ್ಯರಿಗೆ ಪ್ರತ್ಯೇಕವಾಗಿ ಸ್ನಾನ ಮಾಡಲು ಬ್ಯಾರಿಕೇಡ್ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಲಾಗಿದೆ. ಕುಂಭಮೇಳಕ್ಕೆ ಬರುವ ಭಕ್ತಾದಿಗಳಿಗೆ ಜೆಎಸ್ಎಸ್ ಸಂಸ್ಥೆ ಹಾಗೂ ಮತ್ತಿತರ ಸಂಘಟನೆಗಳಿಂದ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.
ಟಿ.ನರಸೀಪುರ ಪಟ್ಟಣದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ನಾಳೆ ಬೆಳಿಗ್ಗೆ 6 ಗಂಟೆಗೆ ಶ್ರೀ ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅನುಜ್ನೆ, ಪುಣ್ಯಾಹ, ಕಳಶ ಸ್ಥಾಪನೆ, ಗಣಹೋಮ,ಅಭಿಷೇಕ, ದೇವತಾರಾಧನೆ ಮಾಡುವ ಮೂಲಕ 13ನೇ ಕುಂಭ ಮೇಳಕ್ಕೆ ವಿದ್ಯುಕ್ತ ಚಾಲನೆ ದೊರಕಲಿದೆ.
12ರಂದು ಬುಧವಾರ ಬೆಳಿಗ್ಗೆ 8 ಗಂಟೆಗೆ ವಿವಿಧ ಮಹಿಳಾ ಸಂಘಗಳ ಮಹಿಳೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಠಣ, 10 ಗಂಟೆಗೆ ಧರ್ಮಾಚಾರ್ಯರ ಯಾಗ ಶಾಲಾ ಪ್ರವೇಶ, ಚಂಡಿಕಾ ಹೋಮದ ಪೂರ್ಣಾಹುತಿ ಹಾಗೂ ಬೆಳಿಗ್ಗೆ 11 ರಿಂದ 11.30. ಮತ್ತು ಮಧ್ಯಾಹ್ನ 1.30 ರಿಂದ 2 ಕ್ಕೆ ಮಹೋದಯ ಪುಣ್ಯ ಮಾಘ ಸ್ನಾನ ನಡೆಯಲಿದೆ. ರಾತ್ರಿ 7ಕ್ಕೆ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಗಂಟೆಗೆ ವಾರಣಾಸಿ ಮಾದರಿಯಂತೆ ನದಿ ಸಂಗಮದಲ್ಲಿ ಗಂಗಾ ಪೂಜೆ ಮತ್ತು ದೀಪಾರತಿ ಕಾರ್ಯಕ್ರಮ ನಡೆಯಲಿದೆ.