ಶಿವಮೊಗ್ಗ,ಸೆ.11-ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹಸೆಮಣೆ ಏರಬೇಕಿದ್ದ ಜೋಡಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಶಿಕಾರಿಪುರ ತಾಲೂಕಿನ ಮಟ್ಟಿಕೊಪ್ಪ ಗ್ರಾಮದ ರೇಖಾ (20) ಹಾಗೂ ಗಂಗೊಳ್ಳಿ ಗ್ರಾಮದ ಬಸವನಗೌಡ ದ್ಯಾಮನಗೌಡ (25) ಸಾವನ್ನಪ್ಪಿರುವ ದುರ್ದೈವಿಗಳು.
ಇವರಿಬ್ಬರ ಮದುವೆ ನಿಶ್ಚಯವಾಗಿದ್ದು, ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರುವ ಕನಸು ಕಾಣುತ್ತಿದ್ದರು. ಮದುವೆ ಸಾಮಾಗ್ರಿ ಖರೀದಿಸುವ ಸಲುವಾಗಿ ಇವರಿಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ಎದುರಿನಿಂದ ಅತೀ ವೇಗವಾಗಿ ಬರುತ್ತಿದ್ದ ಓಮಿನಿ ವಾಹನ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ಸುದ್ದಿ ತಿಳಿದು ಎರಡೂ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ ಇಬ್ಬರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.