ಬಾಗಲಕೋಟೆ,ಜ.23- ಅತಿಯಾದ ಸಾಲದಿಂದ ಮನನೊಂದಿದ್ದ ದಂಪತಿ ಸೇತುವೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೊರವಲಯದಲ್ಲಿ ನಡೆದಿದೆ. ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ನಿವಾಸಿಗಳಾದ ಮಲ್ಲಪ್ಪ ಮುರುಗೆಪ್ಪ ಲಾಳಿ ಹಾಗೂ ಮಹಾದೇವಿ ಲಾಳಿ ಮೃತ ದಂಪತಿ.
ಮೂಲತಃ ಮುಧೋಳ ತಾಲೂಕಿನ ಸೊರಗಾವಿ ಗ್ರಾಮದವರಾದ ಈ ದಂಪತಿ ಕುಟುಂಬ ನಿರ್ವಹಣೆಗೆ ಹಾಗೂ ಕೃಷಿಗೆ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.ಸಾಲ ತೀರಿಸಲಾಗದೆ ಮನನೊಂದಿದ್ದ ಇವರು ಸಾಯಲು ನಿರ್ಧರಿಸಿದ್ದಾರೆ.
ಇವರಿಬ್ಬರೂ ರಾತ್ರಿ ಮುಧೋಳ ನಗರದ ಹೊರವಲಯದಲ್ಲಿರುವ ಯಾದವಾಡ ಸೇತುವೆ ಬಳಿ ಬಂದು ಕಂಬಿಗೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಗಮನಿಸಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಮುಧೋಳ ಸಿಪಿಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಂತರ ಪೊಲೀಸರು ಇಬ್ಬರ ಮೃತದೇಹಗಳನ್ನು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.