ಬೆಂಗಳೂರು,ಅ.14– ತಾನು ಹೆತ್ತ ಇಬ್ಬರು ಕರುಳ ಕುಡಿಗಳಿಗೆ ವಿಷ ಉಣಿಸಿ ಕೊಂದು, ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಪತಿಯೂ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದುರಂತ ಘಟನೆ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ ಮೂಲದ ಅವಿನಾಶ್(38), ಪತ್ನಿ ಮಮತಾ(30), ಮಕ್ಕಳಾದ ಅಧಿರಾ(5) ಮತ್ತು ಅಣ್ಣಯ್ಯ(3) ಮೃತಪಟ್ಟವರು.
ಮೊದಲು ತನ್ನಿಬ್ಬರು ಮಕ್ಕಳಿಗೆ ಮಮತಾ ವಿಷವುಣಿಸಿ ಸಾಯಿಸಿ ನಂತರ ನೇಣು ಹಾಕಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹೊರಗೆ ಹೋಗಿದ್ದ ಅವಿನಾಶ್ ಮನೆಗೆ ಬಂದಾಗ ನೇಣು ಹಾಕಿಕೊಂಡಿದ್ದ ಪತ್ನಿಯನ್ನು ಕೆಳಗಿಳಿಸಿ ನೋಡಿದಾಗ ಪತ್ನಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿರುವುದು ಕಂಡುಬಂದಿದೆ. ನಂತರ ನೋವು ತಾಳಲಾರದೆ ಆತನೂ ಕೂಡ ನೇಣು ಹಾಕಿಕೊಂಡಿದ್ದಾರೆ.
ಅವಿನಾಶ್ ಮತ್ತು ಮಮತಾ ಅವರು ಮದುವೆಯಾದ ನಂತರ ಬೆಂಗಳೂರಿಗೆ ಬಂದು ಯಲಹಂಕ ತಾಲ್ಲೂಕಿನ ಸಿಂಗನಾಯಕನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಕಾರು ಖರೀದಿಸಿ ಅವಿನಾಶ್ ಟ್ಯಾಕ್ಸಿ ಚಾಲಕ ವೃತ್ತಿ ಮಾಡುತ್ತಿದ್ದರು. ಪತ್ನಿ ಮಮತಾ ಅವರು ತನ್ನಿಬ್ಬರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿಯೇ ಇರುತ್ತಿದ್ದರು. ದಸರಾಗೆ ಈ ಕುಟುಂಬ ಊರಿಗೆ ಹೋಗಿರಲಿಲ್ಲ. ಮಕ್ಕಳು ಹೊಸ ಬಟ್ಟೆ ತೊಟ್ಟು ಮನೆಯಲ್ಲಿಯೇ ಹಬ್ಬ ಆಚರಿಸಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಈ ನಡುವೆ ರಾತ್ರಿ ವೇಳೆಗೆ ಇವರ ಕುಟುಂಬದಲ್ಲಿ ಏನಾಯಿತೋ ಏನೋ ಗೊತ್ತಿಲ್ಲ. ನಾಲ್ವರೂ ಸಾವನ್ನಪ್ಪಿದ್ದಾರೆ. ಪತ್ನಿ ಮಮತಾ ಹಾಗೂ ಅವರ ಅಕ್ಕಪಕ್ಕ ಮಲಗಿದ್ದ ಪುಟ್ಟ ಕಂದಮ್ಮಗಳು ಮಲಗಿದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದರೆ, ಅವಿನಾಶ್ ಅವರು ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಇವರ ಮನೆ ಬಾಗಿಲು ಹಾಕಿದಂತೆಯೇ ಇರುವುದು ಗಮನಿಸಿ ಅಕ್ಕಪಕ್ಕದವರಿಗೆ ಅನುಮಾನ ಬಂದು ಮನೆ ಬಳಿ ಹೋಗಿ ನೋಡಿದಾಗ ನಾಲ್ವರೂ ಮೃತಪಟ್ಟಿರುವುದು ಕಂಡುಬಂದಿದೆ.
ತಕ್ಷಣ ರಾಜಾನುಕುಂಟೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದಾಗ ಮನೆ ಯಜಮಾನ ನೇಣು ಬಿಗಿದ ಸ್ಥಿತಿಯಲ್ಲಿ ಹಾಗೂ ಪತ್ನಿ-ಮಕ್ಕಳು ಮಲಗಿದ್ದ ಸ್ಥಿತಿಯಲ್ಲೇ ಸಾವನ್ನಪ್ಪಿರುವುದು ಕಂಡುಬಂದಿದೆ. ಕುಟುಂಬ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಸುಖೀ ಕುಟುಂಬ ಈ ರೀತಿ ದುರಂತ ಸಾವಿಗೀಡಾಗಿರುವುದಕ್ಕೆ ಮಮ್ಮುಲ ಮರುಗಿದ್ದಾರೆ. ಸ್ಥಳೀಯರು ಕೂಡ ಈ ಘಟನೆಯಿಂದ ದಿಗ್ಬ್ರಾಂತರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಮನೆಯಲ್ಲಿದ್ದರು. ಯಾವುದೇ ರೀತಿಯ ಗಲಾಟೆ, ಗದ್ದಲ ಇರಲಿಲ್ಲ. ಏನಾಯಿತೋ ಗೊತ್ತಿಲ್ಲ ಎಂದು ಮನೆಯ ಮಾಲಿಕರು ಹೇಳಿದ್ದಾರೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ರಾಜಾನಕುಂಟೆ ಠಾಣೆ ಇನ್ಸ್ಪೆಕ್ಟರ್ ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಡೆತ್‌ನೋಟ್ ಅಥವಾ ಇತರ ಯಾವುದೇ ವಸ್ತುಗಳಿವೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲಿಸಿದ್ದಾರೆ.ಮಮತಾ ಅವರ ದುಡುಕಿನ ನಿರ್ಧಾರದ ಬಗ್ಗೆ ಇನ್ನೂ ಏನೂ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.