ದಂಪತಿ ಜಗಳ ಕೊಲೆಯಲ್ಲಿ ಅಂತ್ಯ
ಗದಗ, ಡಿ.26- ದಂಪತಿ ನಡುವೆ ನಡೆದ ಜಗಳದಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಗೈದಿರುವ ಘಟನೆ ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಲಕ್ಕುಂಡಿ ಗ್ರಾಮದ ರೇಖಾ ಹಳ್ಳಿಕೇರಿ (26) ಹತ್ಯೆಯಾದ ಪತ್ನಿ. ಮದ್ಯದ ಅಮಲಿನಲ್ಲಿ ಪತಿ ಪರಶುರಾಮ ಪತ್ನಿಯ ಪಕ್ಕೆಲುಬಿಗೆ ಒದ್ದಾಗ ತೀವ್ರವಾಗಿ ಅಸ್ವಸ್ಥಳಾದ ರೇಖಾ ಸಾವನ್ನಪ್ಪಿದ್ದಾಳೆ.
ರಾತ್ರಿ ದಂಪತಿ ನಡುವೆ ನಡೆದ ಜಗಳದ ವೇಳೆ ಪಾನ ಮತ್ತನಾಗಿದ್ದ ಪರಶುರಾಮ ಪತ್ನಿಗೆ ಒದ್ದಿದ್ದು, ಆಕೆ ಮೃತಳಾಗಿದ್ದಾಳೆ. ಈ ಸಂಬಂಧ ಗದಗ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.