ಬೆಂಗಳೂರು,ಏ.19– ನಿರ್ಮಾಣ ಹಂತದ ಕಟ್ಟಡದಲ್ಲಿ ದಂಪತಿ ಮಧ್ಯೆ ಜಗಳವಾಗಿ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ನೋಡಿ ನಂತರ ಪತಿಯೂ ವಿಷ ಸೇವಿಸಿ ಸಾವನ್ನಪ್ಪಿರುವುದು ಸಂಜಯ ನಗರ ಠಾಣೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಯಾದಗಿರಿ ಮೂಲದ ಮೆಹಬೂಬ್ ಮತ್ತು ಪರ್ವಿನ್ ದಂಪತಿ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಮೆಹಬೂಬ್ ಕುಡಿದು ಬಂದು ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿ ಜಗಳವಾಡುತ್ತಿದ್ದನು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಡಾಲರ್ಸ್ ಕಾಲೋನಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದ ದಂಪತಿ ನಡುವೆ ಜಗಳವಾದಾಗ ಆ ವೇಳೆ ಪತ್ನಿ ಕೈಗಳಿಂದ ಹಲ್ಲೆ ನಡೆಸಿದ್ದು ಬಳೆಯ ಚೂರಿನಿಂದ ಆತನ ದೇಹದ ಮೇಲೆ ಗಾಯಗಳಾಗಿರುವುದು ತನಿಖೆಯಿಂದ ಗೊತ್ತಾಗಿದೆ.
ಜಗಳದ ಮಧ್ಯೆ ಮೊಬೈಲ್‌ನ್ನು ಬಿಸಾಡಿದ್ದಾಗ ಅದು ಒಡೆದು ಹೋಗಿದೆ. ಕಿತ್ತಾಟದಿಂದ ನೊಂದು ಪತ್ನಿ ಆತಹತ್ಯೆ ಮಾಡಿಕೊಂಡಿರುವುದು ನೋಡಿ ನಂತರ ಪತಿ ಕೆಲ ಹೊತ್ತು ಹೊರಗೆ ಹೋಗಿ ಬಂದು ವಿಷ ಕುಡಿದು ಆತಹತ್ಯೆ ಮಾಡಿಕೊಂಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಒಟ್ಟಾರೆ ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.