ಬೆಂಗಳೂರು,ಅ.29- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ಗೆ ಪ್ರತಿ ತಿಂಗಳಿಗೊಮ್ಮೆ ಮಾತ್ರ ಬಟ್ಟೆ, ಹೊದಿಕೆ ನೀಡಬೇಕು ಎಂದು 57ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ. ಈ ಹಿಂದೆ ದರ್ಶನ್ ಬೆಡ್‌ಶಿಟ್, ಬಟ್ಟೆ, ದಿಂಬು, ಕನ್ನಡಿ, ಬಾಚಣಿಗೆ ಹಾಗೂ ಇನ್ನಿತರೆ ಸೌಲಭ್ಯಗಳನ್ನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪದ ನ್ಯಾಯಾಲಯ ಬಟ್ಟೆ-ಹೊದಿಕೆಯನ್ನು ನೀಡುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ವಾದ-ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಾಲಯವು , ಪ್ರಕರಣದ ಮೊದಲನೇ ಆರೋಪಿ ಪವಿತ್ರಗೌಡ ಹಾಗೂ ಎರಡನೇ ಆರೋಪಿಯಾಗಿರುವ ದರ್ಶನ್ ಗೆ ತಿಂಗಳಿಗೊಮೆ ಮಾತ್ರ ಬಟ್ಟೆ , ಹೊದಿಕೆ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದು, ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಬೇಕು ಎಂಬ ಕೋರಿಕೆಯ ನಿರ್ಣಯವನ್ನು ಜೈಲಾಧಿಕಾರಿಗಳೇ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದೆ.
ನನ್ನನ್ನು ಕ್ವಾರಂಟೈನ್ ಸೆಲ್‌ನಲ್ಲೇ ಇರಿಸಲಾಗಿದೆ. ಬಿಸಿಲು ಬೀಳದ ಜಾಗದಲ್ಲಿ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ನನ್ನ ಆರೋಗ್ಯದಲ್ಲಿ ಮತ್ತಷ್ಟು ವ್ಯತ್ಯಾಸವಾಗಿದೆ. ಈ ಹಿಂದೆ ನ್ಯಾಯಾಲಯವು ನೀಡಿದ್ದ ಆದೇಶಕ್ಕೂ ಜೈಲಿನ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಜೈಲಿನಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು ಹಲವು ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್ ಕಾಣಿಸಿಕೊಂಡಿದೆ. ನಾನು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ಹೀಗಾಗಿ ತಲೆ ದಿಂಬು, ಬೆಡ್ ಶೀಟ್, ಹಾಸಿಗೆ ನೀಡುವಂತೆ ದರ್ಶನ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.
ಈ ಹಿಂದೆ ದರ್ಶನ್ ಹಾಗೂ ಇತರೆ ಆರೋಪಿಗಳ ಜಾಮೀನು ರದ್ದು ಮಾಡಿದ್ದ ಸುಪ್ರೀಂಕೋರ್ಟ್, ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ವಿಶೇಷ ಸೌಲಭ್ಯ ನೀಡದಂತೆ ಸೂಚಿಸಿತ್ತು. ಅದರಂತೆ ಜೈಲಾಧಿಕಾರಿಗಳು ದರ್ಶನ್‌ಗೆ ಯಾವುದೇ ಸೌಲಭ್ಯಗಳನ್ನು ನೀಡಿರಲಿಲ್ಲ. ಹಾಗಾಗಿ ದರ್ಶನ್ ನ್ಯಾಯಾಲಯದ ಮೊರೆ ಹೋಗಿದ್ದರು.
ಆರೋಪಿಗಳಾದ ಪವಿತ್ರಾಗೌಡ, ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಶೀಘ್ರ ಸಾಕ್ಷ್ಯ ವಿಚಾರಣೆ ಕೋರಿ ಪ್ರಾಸಿಕ್ಯೂಷನ್ ಹಾಕಲಾಗಿದ್ದ ಅರ್ಜಿಯ ಬಗ್ಗೆ, ಸಾಕ್ಷ್ಯ ವಿಚಾರಣೆಗೆ 2 ಕಡೆಯವರು ಸಹಕರಿಸಲು ಕೋರ್ಟ್ ಸೂಚನೆ ನೀಡಿದೆ. ಇದರ ಜೊತೆಗೆ ತಮನ್ನು ಆರೋಪದಿಂದ ಕೈಬಿಡುವಂತೆ ಐದನೇ ಆರೋಪಿ ನಂದೀಶ್ ಅರ್ಜಿ ಹಾಕಿದ್ದ, ಆದರೆ ಆ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಬಾರಿ ಬಂಧಿತರಾಗಿದ್ದ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಪಡೆದಿದ್ದರು. ದರ್ಶನ್, ಇತರೆ ಕೆಲವು ಆರೋಪಿಗಳ ಜೊತೆಗೆ ಕೂತು ಜೈಲಿನಲ್ಲಿಯೇ ಸಿಗರೇಟು ಕುಡಿಯುತ್ತಿರುವ ಫೋಟೊ ವೈರಲ್ ಆಗಿತ್ತು. ಬಳಿಕ ಜೈಲಿನಿಂದ ವಿಡಿಯೋ ಕಾಲ್ ಮಾಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ಬಳಿಕ ಅವರು ಆರೋಗ್ಯದ ಕಾರಣ ನೀಡಿ ಜಾಮೀನು ಪಡೆದು ಹೊರಗೆ ಬಂದಿದ್ದರು. ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದ ಕಾರಣ ಈಗ ಮತ್ತೆ ಜೈಲು ಸೇರಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ತಮಗೆ ಮಲಗಲು ಹೆಚ್ಚುವರಿ ಹಾಸಿಗೆ ಮತ್ತು ದಿಂಬು ಬೇಕೆಂದು ಮನವಿ ಮಾಡಿದ್ದರು. ಜೈಲಧಿಕಾರಿಗಳು ಹೆಚ್ಚುವರಿ ಹಾಸಿಗೆ-ದಿಂಬು ನೀಡಲು ನಿರಾಕರಿಸಿದ ಕಾರಣ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು. ಕೆಲ ದಿನಗಳ ಹಿಂದೆ ನಡೆದ ವಾದದ ಸಮಯದಲ್ಲಿ ನಟ ದರ್ಶನ್ ಪರ ವಕೀಲರು, ಜೈಲಧಿಕಾರಿಗಳು ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ದರ್ಶನ್ ಅವರಿಗೆ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್‌ಶೀಟ್ ನೀಡಿಲ್ಲ ಎಂದು ವಾದಿಸಿದ್ದರು.
ಕ್ವಾರಂಟೈನ್ ಸೆಲ್ ಸಹ ಕಾರಾಗಹದ ಭಾಗವೇ. 1964ರ ಜೈಲು ನಿಯಮಗಳಡಿ ಯಾವ ಆರೋಪಿ/ಕೈದಿಯನ್ನ ಹೇಗೆ ನಡೆಸಿಕೊಳ್ಳಬೇಕು, ಯಾವ ಬ್ಯಾರಕ್‌ಗೆ ಯಾವಾಗ ಸ್ಥಳಾಂತರಿಸಬೇಕು ಎಂಬ ಬಗ್ಗೆ ಉಲ್ಲೇಖವಿದೆ. ಇಲ್ಲಿ ಭದ್ರತಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಆರೋಪಿಯನ್ನು ಕ್ವಾರಂಟೈನ್ ಸೆಲ್‌ನಲ್ಲಿರಿಸಲಾಗಿದೆ. ಈ ಹಿಂದೆ ಜೈಲಿನಲ್ಲಿದ್ದಾಗ ಸೌಲಭ್ಯಗಳನ್ನ ಆರೋಪಿ ದರ್ಶನ್ ದುರುಪಯೋಗಪಡಿಸಿಕೊಂಡಿದ್ದಾರೆ’ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
