ನವದೆಹಲಿ,ಡಿ.14- ಮುಡಾ ಹಾಗೂ ಮಹರ್ಷಿ ವಾಲೀಕಿ ಹಗರಣಗಳನ್ನು ಮುಚ್ಚಿಹಾಕಲು ಕೋವಿಡ್ ಕಾಲದ ಹಗರಣಗಳನ್ನು ಮುನ್ನೆಲೆಗೆ ತರುವ ಮೂಲಕ ರಾಜ್ಯಸರ್ಕಾರ ಬಿಜೆಪಿ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಸ್ಟೀಸ್ ಮೈಕಲ್ ಕುನ್ಹರವರು ಇನ್ನೂ ಸಂಪೂರ್ಣ ಪ್ರಮಾಣದ ವರದಿ ನೀಡಿಲ್ಲ. ಕೇವಲ ಮಧ್ಯಂತರ ವರದಿಯನ್ನು ಆಧಾರವಾಗಿಟ್ಟುಕೊಂಡು ಎಫ್ಐಆರ್ ದಾಖಲಿಸಿರುವುದು ಹಾಸ್ಯಾಸ್ಪದ ಎಂದರು.
ಇಷ್ಟು ದಿನ ಸುಮನಿದ್ದರು. ಈ ಹಿಂದೆ ವಿರೋಧಪಕ್ಷದ ನಾಯಕರಾಗಿದ್ದಾಗ ಸಾಕಷ್ಟು ಬಾರಿ ಆರೋಪ ಮಾಡಿದ್ದರು. ಸರ್ಕಾರ ಬಂದ ಮೇಲೂ ಕೂಡ ಇಷ್ಟು ದಿನ ಸುಮನೆ ಕುಳಿತಿದ್ದರು.
ಮುಡಾ ಹಾಗೂ ವಾಲೀಕಿ ನಿಗಮದ ಹಗರಣಗಳು ಬೆಳಕಿಗೆ ಬಂದು ಅಧಿಕಾರಕ್ಕೆ ಕುತ್ತು ಬಂದ ಸಂದರ್ಭದಲ್ಲಿ ಕೋವಿಡ್ ಹಗರಣ ತನಿಖೆ ಮಾಡುತ್ತೇವೆ ಎಂದು ಹೊರಟಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಹೇಳಿದರು.
ಕೋವಿಡ್ ಹಗರಣದಲ್ಲಿ ಯಾವುದೇ ತನಿಖೆಗಳು ಪೂರ್ಣಗೊಂಡಿಲ್ಲ. ಆರೋಪ ಸಾಬೀತಾಗಿಲ್ಲ. ಕೇವಲ ವಿಚಾರಣಾ ಆಯೋಗದ ಮಧ್ಯಂತರ ಅವಧಿಯ ವರದಿಯನ್ನು ಆಧಾರವಾಗಿಸಿಕೊಂಡು ಎಫ್ಐಆರ್ ದಾಖಲಿಸಲಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಊರ್ಜಿತವೂ ಆಗುವುದಿಲ್ಲ ಎಂದು ತಿಳಿಸಿದರು.ರಾಜಕೀಯ ದ್ವೇಷಕ್ಕಾಗಿ ಸರ್ಕಾರ ತೆಗೆದುಕೊಳ್ಳುವ ಕ್ರಮಗಳಿಗೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ತಿರುಗೇಟು ನೀಡಿದರು.