ಬೆಂಗಳೂರು, ಮೇ 25– ಕೋವಿಡ್ ಸೋಂಕಿನ ಉಪತಳಿ ಅಷ್ಟೇನೂ ಅಪಾಯಕಾರಿಯಲ್ಲ. ಹೀಗಾಗಿ ಜನ ಆತಂಕಗೊಳ್ಳುವ ಅಗತ್ಯವಿಲ್ಲ, ಮುಂದಿನ ಮೂರಾಲ್ಕು ದಿನಗಳ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಜೆ-1 ಉಪತಳಿಯಿಂದ ಹೆಚ್ಚಿನ ದುಷ್ಪರಿಣಾಮ ಬೀರಿದ ವರದಿಗಳು ಎಲ್ಲೂ ವರದಿಯಾಗಿಲ್ಲ. ಯಾರೂ ಗಂಭೀರ ಪರಿಸ್ಥಿತಿಗೆ ಹೋಗಿರುವ ಉದಾಹರಣೆಗಳಿಲ್ಲ, ಸಿಂಗಾಪುರ ಹಾಗೂ ಇತರ ದೇಶಗಳಲ್ಲಿ ಕೋವಿಡ್ ಹಬ್ಬಿದೆ. ಅದರಿಂದ ಆತಂಕದ ವಾತಾವರಣವಿಲ್ಲ, ಪ್ರವಾಸ ಮಾಡಬಾರದು ಎಂದು ಯಾರೂ ನಿರ್ಬಂಧ ಹೇರಿಲ್ಲ. ಮೊದಲ ಮತ್ತು ಎರಡನೇ ಹಂತದ ಕೋವಿಡ್ ಪರಿಸ್ಥಿತಿ ಈಗಿಲ್ಲ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವಿರುತ್ತೇವೆ ಎಂದರು.
ಕೇಂದ್ರ ಸರ್ಕಾರ ರಾಜ್ಯದ ಆರೋಗ್ಯ ಇಲಾಖಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ನೀಡಿರುವ ಮಾರ್ಗಸೂಚಿಗಳೇ ಸಾಕು. ವಿಶೇಷ ಕ್ರಮಗಳ ಅಗತ್ಯ ಇಲ್ಲ. ಜನ ವಿಶೇಷ ನಿಗಾ ವಹಿಸುವ ರಿಸ್ಕ್ ಕೆಟಗರಿಯವರು ಮಾಸ್ಕ್ ಧರಿಸಿ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ.
ಶಾಲಾ-ಕಾಲೇಜುಗಳಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಮೂರಾಲ್ಕು ದಿನ ಪರಿಶೀಲಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಯಾವುದೇ ಆತಂಕದ ವಾತಾವರಣವಿಲ್ಲ ಎಂದರು.
ಕೋವಿಡ್ ಪರೀಕ್ಷೆಗೆ ಆದೇಶಿಸಲಾಗಿದೆ. ಅಗತ್ಯವಾದ ಟೆಸ್ಟ್ ಕಿಟ್ಗಳು ನಾಳೆ, ನಾಡಿದ್ದರೊಳಗೆ ಬರುತ್ತವೆ. ಸಾರಿ ಹಾಗೂ ಐಎಲ್‌ಐ ಪ್ರಕರಣಗಳು, ವಯೋವೃದ್ಧರಿಗೆ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಟೆಸ್ಟ್ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.
ಮುಂದಿನ 2-3 ದಿನ ದೇಶ ಹಾಗೂ ರಾಜ್ಯದಲ್ಲಿ ಸೋಂಕಿನ ಹರಡುವಿಕೆಯ ಬಗ್ಗೆ ನಿಗಾ ವಹಿಸಲಾಗಿದೆ. ಕೋವಿಡ್ ನಿಯಂತ್ರಣ ಸಲಹಾ ಸಮಿತಿ ಪ್ರತಿವಾರ ಸಭೆ ಸೇರಿ ಚರ್ಚೆ ನಡೆಸುವಂತೆ ಸೂಚಿಸಲಾಗಿದೆ ಎಂದರು.
ಸೋಂಕಿನಿಂದ ನಿನ್ನೆ ಒಬ್ಬರು ಮೃತಪಟ್ಟಿರುವುದು ಖಚಿತವಾಗಿದೆ. ಅವರಿಗೆ 84 ವರ್ಷವಾಗಿತ್ತು. ಒಂದು ವರ್ಷದಿಂದ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಹಿಪ್ ರಿಪ್ಲೇಸ್‌ಮೆಂಟ್, ಹೃದ್ರೋಗ, ಕ್ಷಯ ರೋಗವೂ ಇತ್ತು. ನಾನಾ ಆರೋಗ್ಯ ಸಮಸ್ಯೆಗಳಿದ್ದವು. ಕೋವಿಡ್ ಸೋಂಕಿನಿಂದಲೇ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಆಡಿಟ್ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಸೋಂಕನ್ನು ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ, ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗಿದೆ. ಏಕಾಏಕಿ ಲಾಕ್ ಡೌನ್ ಮಾಡಲು ಸಾಧ್ಯವಿಲ್ಲ. ಎಲ್ಲಾ ಬೆಳವಣಿಗೆಗಳ ಮೇಲೆ ನಿಗಾ ವಹಿಸಲಾಗಿದೆ. ಅಧಿಕಾರಿಗಳು ಕೇಂದ್ರ ಸರ್ಕಾರದ ಜೊತೆ ಪದೇಪದೇ ಸಮಾಲೋಚನೆ ನಡೆಸುತ್ತಿದ್ದಾರೆ. ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಕೋವಿಡ್‌ನ ವ್ಯಾಪಕ ಪರೀಕ್ಷೆಯಿಂದ ವಾತಾವರಣ ತಿಳಿದುಬರಲಿದೆ. ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ನಿರ್ಬಂಧ ವಿಧಿಸುವ ವರಿಸ್ಥಿತಿಯೂ ಇಲ್ಲ. ಇಂಥಹ ವಿಚಾರದಲ್ಲಿ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು, ಸದ್ಯಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಅಂತರಾಜ್ಯ ಪ್ರವಾಸ ಸೇರಿದಂತೆ ಎಲ್ಲಾ ಚಟುವಟಿಕೆಗಳು ಮುಕ್ತವಾಗಿರಲಿವೆ.
ಖಾಸಗಿ ಆಸ್ಪತ್ರೆಗಳು ಸೋಂಕಿನ ಪರೀಕ್ಷೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲೇಬೇಕು. ಪರೀಕ್ಷಾ ವೆಚ್ಚ ನಿರ್ಧರಣೆ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ತಮ್ಮೊಂದಿಗೆ ಈ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಕಾಲಕಾಲಕ್ಕೆ ಮಾಹಿತಿ ಒದಗಿಸಬೇಕು ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹಿಂದುಮುಂದು ನೋಡಬಾರದು ಎಂದು ಆದೇಶಿಸಿದ್ದಾರೆ ಎಂದು ತಿಳಿಸಿದರು.