Tuesday, October 22, 2024
Homeರಾಜಕೀಯ | Politicsಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌‍ ನಾಯಕರ ಸಂಪರ್ಕದಲ್ಲಿದ್ದಾರೆ : ಹೆಚ್‌ಡಿಕೆ ಆರೋಪ

ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌‍ ನಾಯಕರ ಸಂಪರ್ಕದಲ್ಲಿದ್ದಾರೆ : ಹೆಚ್‌ಡಿಕೆ ಆರೋಪ

CP Yogeshwar is in touch with Congress leaders: HDK alleges

ಬೆಂಗಳೂರು, ಅ.21-ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಅವರು ಕಾಂಗ್ರೆಸ್‌‍ ನಾಯಕರ ಜತೆಯೂ ಸಂಪರ್ಕದಲ್ಲಿದ್ದಾರೆ. ಬೇರೆ ಬೇರೆ ಪಕ್ಷಗಳ ಮುಖಂಡರ ಜತೆಯೂ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರ ಹೊರಗಡೆ ಚರ್ಚೆಯಾಗುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್‌ ಅವರು ಉಪ ಮುಖ್ಯಮಂತ್ರಿಯನ್ನು ಈಗಾಗಲೇ ಎರಡು ಬಾರಿ ಭೇಟಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಅವರು ಏತಕ್ಕೆ ಭೇಟಿ ಮಾಡಿದ್ದರು ಎಂಬುದು ನನಗೆ ಬೇಕಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿಯಲ್ಲಿ ಇರುವಂತಹ ಕೆಲವೇ ಕೆಲವರು ಕುಮಾರಸ್ವಾಮಿಗೆ ದೆಹಲಿ ಮಟ್ಟದಲ್ಲಿ ಉತ್ತಮ ಬಾಂಧವ್ಯ ಇದೆ. ಹೀಗಾಗಿ ಅವರಿಗೆ ಏನಾದರೂ ಸಮಸ್ಯೆ ಉದ್ಭವ ಮಾಡಬೇಕು ಎನ್ನುವ ಕಾರಣಕ್ಕೆ ಇಂತಹ ಪ್ರಕರಣಗಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದಾಗಿ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ. ಅದು ನನ್ನ ಕಿವಿಗೂ ಬಿದ್ದಿದೆ. ಬಿಜೆಪಿ – ಜೆಡಿಎಸ್‌‍ ಮೈತ್ರಿಗೆ ಹುಳಿ ಹಿಂಡುವವರು ಬಹಳಷ್ಟು ಜನ ಇದ್ದಾರೆ. ಒಟ್ಟಾರೆ ಕುಮಾರಸ್ವಾಮಿಯನ್ನು ಹಾಳು ಮಾಡಲು ಹೊರಟಿದ್ದಾರೆ. ಅವರ ಪ್ರಯತ್ನ ಫಲ ಕೊಡುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಹುಳಿ ಹಿಂಡುವವರು ನಮ ಪಕ್ಷದಲ್ಲಿ ಇಲ್ಲ. ಆದರೆ ಅಲ್ಲಿ ಹುಳಿ ಹಿಂಡುವವರು ಕಾಂಗ್ರೆಸ್‌‍ ನಾಯಕರ ಜತೆ ಸೇರಿಕೊಂಡಿದ್ದಾರೆ. ಅದು ನನಗೆ ಗೊತ್ತಿದೆ. ಪ್ರಧಾನ ಮಂತ್ರಿ ಅವರನ್ನು ಅಸ್ಥಿರಗೊಳಿಸಲು ಅವರು ಕಾಂಗ್ರೆಸ್‌‍ ನಾಯಕರ ಜತೆ ಸೇರಿಕೊಂಡು ಮಸಲತ್ತು ಮಾಡುತ್ತಿರಬಹುದು. ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಧಕ್ಕೆ ಆಗಬಾರದು. ಇದೆಲ್ಲವನ್ನು ಗಮನಿಸುತ್ತಿದ್ದೇನೆ. ಇದಕ್ಕೆ ನಾನು ಅವಕಾಶ ಕೊಡಬೇಕಾ? ಎಂದು ಅವರು ಪ್ರಶ್ನಿಸಿದ್ದಾರೆ.

ಇಂತಹ ಕುತಂತ್ರಕ್ಕೆ ನಾನು ಯಾಕೆ ಬಲಿಯಾಗಬೇಕು? ನೋಡೋಣ, ಮುಂದೆ ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ತೀರ್ಮಾನ ಮಾಡುತ್ತೇವೆ. ನನಗೆ ಬೇಕಿರುವುದು ಪ್ರಧಾನಮಂತ್ರಿಯವರಿಗೆ ಶಕ್ತಿ ತುಂಬುವುದಷ್ಟೇ. ಆ ನಿಟ್ಟಿನಲ್ಲಿ ನಾನು ತೀರ್ಮಾನ ಮಾಡುತ್ತೇನೆ. ಆ ನಿಟ್ಟಿನಲ್ಲಿ ಚನ್ನಪಟ್ಟಣ ಕ್ಷೇತ್ರ ಗೆಲ್ಲಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್‌‍ ಹುನ್ನಾರಕ್ಕೆ ಬಲಿಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ-ಜೆಡಿಎಸ್‌‍ ಮೈತ್ರಿಯನ್ನು ಹಾಳು ಮಾಡಲು ಕೆಲವರು ಷಡ್ಯಂತರ ಮಾಡುತ್ತಿರಬಹುದು. ನನ್ನ ಗಮನಕ್ಕೂ ಹಲವಾರು ವಿಚಾರಗಳು ಬರುತ್ತಿವೆ. ಚನ್ನಪಟ್ಟಣ ಕ್ಷೇತ್ರದ ಪಕ್ಕದ ಮದ್ದೂರು ಕ್ಷೇತ್ರದ ಶಾಸಕರ ಜೊತೆ ಯೋಗೇಶ್ವರ್‌ ಸಂಪರ್ಕದಲ್ಲಿರುವುದಾಗಿ ಚರ್ಚೆ ನಡೆಯುತ್ತಿದೆ. ಎಲ್ಲವನ್ನೂ ಬಿಜೆಪಿ ವರಿಷ್ಠ ನಾಯಕರು ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯಾಗಿ ಯೋಗೇಶ್ವರ್‌ ಅವರಿಗೆ ಜೆಡಿಎಸ್‌‍ ಚಿಹ್ನೆ ಅಡಿ ನಿಲ್ಲಿಸಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯೋಗೇಶ್ವರ್‌ ಅವರು ಮೇಲೆ ಇದ್ದಾರೆ. ದೊಡ್ಡವರು. ಅವರ ಬಗ್ಗೆ ನಾನೇನು ಚರ್ಚೆ ಮಾಡಲಿ? ಅವರು ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಎಲ್ಲವನ್ನೂ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಘೋಷಣೆ ಬಾಕಿ ಇದೆ. ಈಗಾಗಲೇ ಬಿಜೆಪಿ ವರಿಷ್ಠ ನಾಯಕರು ಹಲವು ಬಾರಿ ಹೇಳಿದ್ದಾರೆ. ನೀವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಬಗ್ಗೆ ನೀವೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ. ಚನ್ನಪಟ್ಟಣ ಜೆಡಿಎಸ್‌‍ ಸ್ಪರ್ಧಿಸಿರುವ ಕ್ಷೇತ್ರ ಎನ್ನುವುದು ಅವರಿಗೆ ಗೊತ್ತಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಈಗಾಗಲೇ ಘೋಷಣೆ ಮಾಡಿದೆ. ಚನ್ನಪಟ್ಟಣದಲ್ಲಿ ನಾವು ಘೋಷಣೆ ಮಾಡುತ್ತೇವೆ. ಚನ್ನಪಟ್ಟಣ ವಿಚಾರದಲ್ಲಿ ಇನ್ನೂ ನಾವು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನನ್ನ ವರ್ಚಸ್ಸು ಕುಗ್ಗಿಸುವ ಹುನ್ನಾರ : ಏನಾದರೂ ಮಾಡಿ ಕುಮಾರಸ್ವಾಮಿ ವರ್ಚಸ್ಸು ಕುಗ್ಗಿಸಬೇಕು ಎನ್ನುವುದು ಕೆಲವು ಕಾಂಗ್ರೆಸ್‌‍ ನಾಯಕರ ಉದ್ದೇಶ. ನಾನು ಎಲ್ಲಾ ಬಿಜೆಪಿ ನಾಯಕರ ಬಗ್ಗೆ ಹೇಳುತ್ತಿಲ್ಲ. ಕೆಲವರಿಗೆ ಈ ಮೈತ್ರಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಿಮ್ಮ ಕುಟುಂಬದಿಂದಲೇ ಯಾರಾದರೂ ಸ್ಪರ್ಧೆ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿವರೆಗೂ ಎಲ್ಲೂ ನಮ ಕುಟುಂಬದವರು ಸ್ಪರ್ಧೆ ಮಾಡುತ್ತಾರೆ ಎಂದು ನಾನು ಹೇಳಿಲ್ಲ. ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೂರು ಬಾರಿ ಹೇಳಿದ್ದಾರೆ. ಚುನಾವಣೆಯಲ್ಲಿ ನಿಲ್ಲಲ್ಲ. ಇನ್ನು ಮೂರು ವರ್ಷ ಕಾಯುತ್ತೇನೆ ಎಂದು ಅವರು ಹೇಳಿದ್ದಾರೆ. ನಾನೇನಾದರೂ ಹೇಳಿದ್ದೇನೆಯೇ? ನಿಖಿಲ್‌ ಕುಮಾರಸ್ವಾಮಿ ನಿಲ್ಲುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ನಾನು ಹೇಳಿರುವುದು ಎನ್‌ಡಿಎ ಅಭ್ಯರ್ಥಿ ನಿಲ್ಲುತ್ತಾರೆ ಎಂದು. ಅದು ಬಿಜೆಪಿಯಿಂದ ಅಥವಾ ಜೆಡಿಎಸ್‌‍ನಿಂದ ಆದರೂ ಆಗಬಹುದು ಅಂತ ಅಷ್ಟೇ. ಅಭ್ಯರ್ಥಿಯನ್ನು ನಿಲ್ಲಿಸಲೇಬೇಕಲ್ವೆ? ಪಲಾಯನ ಮಾಡೋಕಾಗುತ್ತಾ?ಯಾವುದೇ ಕಾರಣಕ್ಕೂ ಕಾಂಗ್ರೆಸ್‌‍ ಇಲ್ಲಿ ಲಾಭ ಪಡೆಯಲು ಸಾಧ್ಯವಿಲ್ಲ.

ಏಕೆಂದರೆ, ಚನ್ನಪಟ್ಟಣದಲ್ಲಿ ಕಾಂಗ್ರೆಸ್‌‍ ಬಲಯುತವಾಗಿಲ್ಲ. ಆ ಪಕ್ಷಕ್ಕೆ ಅಲ್ಲಿ ಕಾರ್ಯಕರ್ತರ ಪಡೆಯೇ ಇಲ್ಲ. ಹಣದ ಮುಖಾಂತರ ಅಧಿಕಾರದ ದುರುಪಯೋಗದ ಮೂಲಕ ರಾಜಕಾರಣ ಮಾಡಬೇಕು ಅಷ್ಟೆ. ಕಳೆದ 25 ವರ್ಷಗಳಿಂದ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌‍ 3ನೇ ಸ್ಥಾನದಲ್ಲಿದೆ. ಈಗ ಕಾಂಗ್ರೆಸ್ಸಿನ ಕುತಂತ್ರಕ್ಕೆ ಕೆಲವರು ಬಲಿಯಾಗಲು ಹೊರಟಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

RELATED ARTICLES

Latest News