ಹಾಸನ, ನ.14- ನಡುರಸ್ತೆಯಲ್ಲಿ ವಿದ್ಯಾರ್ಥಿಗಳು ರೀಲ್ಸ್ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಹುಚ್ಚಾಟ ಮರೆದಿದ್ದು, ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹಾಸನದ ಇಬ್ಬರು ವಿದ್ಯಾರ್ಥಿಗಳು ಹಾಗೂ ಕುಣಿಗಲ್ ತಾಲೂಕಿನ ವಿದ್ಯಾರ್ಥಿ ಸೇರಿಕೊಂಡು ಕಾಲೇಜು ಎದುರಿನ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರಿಗೆ ಪೆಟ್ರೋಲ್ ತುಂಬಿ ಅದರ ಮೇಲೆ ಪಟಾಕಿ ಇಟ್ಟು ಬೆಂಕಿ ಹಚ್ಚಿದ್ದಾರೆ.
ಪರಿಣಾಮ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಇದೇ ರಸ್ತೆಯ ಅನತಿ ದೂರದಲ್ಲಿ ನಿಂತಿದ್ದ ಪೆಟ್ರೋಲ್ ಟ್ಯಾಂಕರ್‌ಗೆ ಒಂದು ವೇಳೆ ಬೆಂಕಿ ತಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಭಾರಿ ಅನಾಹುವೊಂದು ತಪ್ಪಿದಂತಾಗಿದೆ.ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ(ಎಚ್‌ಪಿಸಿಎಲ್) ಸಮೀಪವೇ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಈ ವಿದ್ಯಾರ್ಥಿಗಳು ಹುಚ್ಚಾಟ ಮೆರೆದಿದ್ದು, ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿಡಿಯೋ ಮಾಡಿ ಇನ್‌ಸ್ಟ್ರಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಅಕ್ರೋಶ:
ವಿದ್ಯಾರ್ಥಿಗಳ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಹಾಜರುಪಡಿಸಿ ದಂಡ ವಿಧಿಸಿದ್ದಾರೆ.