ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಕ್ಕೆ ಅತಿ ಮಹತ್ವದ ಸ್ಥಾನ ಇರಲಿದೆ. ಸ್ನೇಹಿತರೊಟ್ಟಿಗೆ ಕಳೆಯುವ ಸಮಯ, ಹರಡುವ ಹರಟೆ, ಮೋಜು ಮಸ್ತಿ ಅವಿಸ್ಮರಣೀಯ. ಆದರೆ, ಇಂದಿನ ಬ್ಯುಸಿ ಜೀವನದಲ್ಲಿ ತಮ್ಮ ಹಳೇ ಸ್ನೇಹಿತರನ್ನು ಭೇಟಿಯಾಗುವುದೇ ದೊಡ್ಡ ಸಾಹಸವಾಗಿದೆ. ಎಲ್ಲಾ ಸ್ನೇಹಿತರನ್ನು ಒಂದೆಡೆ ಸೇರಿಸಲು ಈ ಸ್ನೇಹಿತರ ದಿನಾಚರಣೆ ಉತ್ತಮ ದಿನ. ಆಗಸ್ಟ್ 4ರ ರಾಷ್ಟ್ರೀಯ ಸ್ನೇಹಿತರ ದಿನಾಚರಣೆ ಯಂದು ನಿಮ್ಮ ಸ್ನೇಹಿತರೊಟ್ಟಿಗೆ ಏನೆಲ್ಲಾ ಪ್ಲಾನ್ ಮಾಡಬಹುದು ಎಂಬುದಕ್ಕೆ ಒಂದಷ್ಟು ಸಲಹೆ ಇಲ್ಲಿವೆ.
1. ಡಿನ್ನರ್ ಪ್ಲಾನ್: ಸ್ನೇಹಿತರೆಲ್ಲಾ ಸೇರಿ ಊಟ ಮಾಡುವ ಆ ಮಜವೇ ಬೇರೆ ಅಲ್ಲವೇ..! ಹೌದು, ನಿಮ್ಮ ಸ್ನೇಹಿತರಿಗೆಲ್ಲಾ ಈಗಲೇ ಸ್ನೇಹಿತರ ದಿನದ ಡಿನ್ನರ್ ಪ್ಲಾನ್ ಸಿದ್ಧಗೊಳಿಸಿ. ಸಾಧ್ಯವಾದಷ್ಟು ನಗರದ ಹೊರಪ್ರದೇಶದ ಹೋಟೆಲ್‌ಗಳನ್ನೇ ಆಯ್ಕೆ ಮಾಡಿ. ಈ ಕಾರಣದಿಂದಲಾದರೂ ಸ್ವಲ್ಪ ದೂರ ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ.
2. ಟ್ರಿಪ್ ಪ್ಲಾನ್: ಸ್ನೇಹಿತರೊಟ್ಟಿಗೆ ಎಲ್ಲಿಗೆ ಪ್ರವಾಸ ಬೆಳೆಸಿದರೂ ಅದು ಸದಾ ನೆನಪಿನಲ್ಲಿ ಉಳಿಯುವ ದಿನವಾಗುವುದರಲ್ಲಿ ಅನುಮಾನವಿಲ್ಲ. ಹೇಗೋ ಸ್ನೇಹಿತರ ದಿನವೂ ಭಾನುವಾರವೇ ಬಂದಿರುವ ಕಾರಣ, ಈ ವೀಕೆಂಡ್ ನಿಮ್ಮ ಸ್ನೇಹಿತರೊಂದಿಗೆ ಹೀಲ್ಸ್ ಟ್ರಕ್ಕಿಂಗ್, ಫಾಲ್ಸ್, ಮಲೆನಾಡಿನಂತಹ ಹಸಿರುಮಯ ತಾಣಗಳು ಅಥವಾ ಲಾಂಗ್ ಡ್ರೈವ್ ಪ್ಲಾನ್ ಮಾಡಬಹುದು.
3. ಶಾಪಿಂಗ್ ನಿಮ್ಮ ಆಯ್ಕೆಯೇ?: ಇನ್ನು ಹೆಣ್ಣುಮಕ್ಕಳಿಗೆ ಹೆಚ್ಚು ಇಷ್ಟವಾಗುವ ಹವ್ಯಾಸದಲ್ಲಿ ಶಾಪಿಂಗ್‌ನನ್ನು ತಳ್ಳಿ ಹಾಕುವಂತಿಲ್ಲ. ಸ್ನೇಹಿತರೆಲ್ಲಾ ಒಟ್ಟುಗೂಡಿ ಯಾವುದಾದರೊಂದು ಮಾಲ್ ಅಥವಾ ಶಾಪಿಂಗ್ ಸೆಂಟರ್‌ಗಳಿಗೆ ತೆರಳಿ ನಿಮ್ಮ ಸ್ನೇಹಿತರ ಅಭಿಪ್ರಾಯದೊಂದಿಗೆ ಶಾಪಿಂಗ್ ಮಾಡಿ. ಒಟ್ಟಿಗೆ ಖರೀದಿಸುವ ಬಟ್ಟೆ ಅಥವಾ ವಸ್ತುಗಳು ಸ್ನೇಹಿತರ ನೆನಪಿನೊಂದಿಗೆ ಸದಾ ನಮ್ಮೊಂದಿಗಿರಲಿದೆ.
4. ನೀವು ಗೇಮ್ ಆಡುವವರರೇ? ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಭೇಟಿ ನೀಡಿ: ಸ್ನೇಹಿತರೆಂದರೆ ಸ್ವಲ್ಪವಾದರೂ ಅಡ್ವೆಂಚರ್ಸ್ ಬೇಕೇ ಬೇಕು, ಕೆಲವರು ಅಡ್ವೆಂಚರ್ಸ್ ಗೇಮ್ ನಿರೀಕ್ಷಿಸಿದರೆ, ಇನ್ನೂ ಕೆಲವರು ನೀರಿನಲ್ಲಿ ಆಡವಾಡಲು ಇಷ್ಟಪಡುತ್ತಾರೆ. ಅಂಥವರಿಗೆ ಹೇಳಿ ಮಾಡಿಸಿದ ಜಾಗವೆಂದರೆ ಅಮ್ಯೂಸ್ಮೆಂಟ್ ಪಾರ್ಕ್. ಸ್ನೇಹಿತರ ದಿನಾಚರಣೆ ಪ್ರಯುಕ್ತ ವಂಡರ್‌ಲಾ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಉಚಿತವಾಗಿ ನೀಡುತ್ತಿದೆ. ಹೀಗಾಗಿ ನೀವು ನಿಮ್ಮ ಸ್ನೇಹಿತರ ಗುಂಪಿನಲ್ಲಿ ತೆರಳಿದರೆ, ಉಳಿತಾಯದ ಜೊತೆಗೆ, ಲೈವ್ ಡಿಜೆ, ವಿಶೇಷ ಸಂಜೆ ಜುಂಬಾ, ಮೋಜಿನ ಆಟಗಳು ಮತ್ತು ಬಹುಮಾನಗಳು, ಎಲ್ಲಾ ರೋಮಾಂಚಕ ಪಾರ್ಕ್ ರೈಡ್‌ಗಳು ಮತ್ತು ಸೌಕರ್ಯಗಳನ್ನು ವಂಡರ್‌ಲಾ ನೀಡುತ್ತಿದೆ.