Friday, October 18, 2024
Homeರಾಜ್ಯಜೀವವನ್ನೇ ಬಲಿ ಪಡೆದ ಕ್ರೆಡಿಟ್ ಕಾರ್ಡ್..!

ಜೀವವನ್ನೇ ಬಲಿ ಪಡೆದ ಕ್ರೆಡಿಟ್ ಕಾರ್ಡ್..!

Credit Card

ಯಲಹಂಕ, ಅ.17– ಭೂಮಿಯಲ್ಲಿ ಜೀವ ಅಮೂಲ್ಯವಾದ ಕೊಡುಗೆ, ಮನುಷ್ಯ ಜನ್ಮದ ಮಹತ್ವ ಕೆಲವರಿಗೆ ಇನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ಶೋಚನೀಯ… ಮನುಷ್ಯ ಭೂಮಿಗೆ ಬಂದಾಗಿನಿಂದ ಒಂದಿಲ್ಲೊಂದು ಆವಿಷ್ಕಾರ, ಹೊಸತನಗಳಿಗೆ ಮುನ್ನುಡಿ ಬರೆಯುತ್ತಿದ್ದಾನೆ. ಅದಕ್ಕೆ ಜೀವನ, ಜೀವನ ಶೈಲಿ, ಅವಶ್ಯಕತೆಗಳನ್ನು ಪೂರೈಸಲು 24 ಗಂಟೆ ಸಮಯ, ಕೈ ತುಂಬಾ ಹಣ ಇದ್ದರೂ ಸಾಲದಾಗಿದೆ.

ದುಡಿಮೆಗೆ ಅನುಗುಣವಾಗಿ ಮನುಷ್ಯ ಜೀವನ ರೂಢಿಸಿಕೊಳ್ಳುವಲ್ಲಿ ವಿಫಲನಾಗುತ್ತಿದ್ದಾನೆ. ಬೇಕು- ಬೇಡಗಳ ಪರಿಕಲ್ಪನೆಯು ಇಲ್ಲದೆ ಅವಶ್ಯಕತೆಗಳನ್ನು ಮೀರಿದ ಜೀವನಕ್ಕೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾನೆ.

ಅತಿ ವೇಗವಾಗಿ ಓಡುತ್ತಿರುವ ಜೀವನದಲ್ಲಿ ತಮಗೇನು ಬೇಕು ಎಂಬುದಕ್ಕಿಂತ ತಮ್ಮ ಅನುಕೂಲ, ಯೋಗ್ಯತೆ ಮರೆತು ಪರರನ್ನು ಮೆಚ್ಚಿಸಲು ಅಥವಾ ಪರರಿಗಿಂತ ನಾನೇನು ಕಮ್ಮಿ ಎಂದು ಬೀಗಲು ಹೋಗಿ ಮುಚ್ಚಿದ ಬಾಗಿಲ ಹಿಂದೆ, ದಟ್ಟ ಕಾನನದ ವೃಕ್ಷಗಳ ಕೊಂಬೆ ಸೇರಿದಂತೆ ಮತಿಬ್ರಮನಾಗಿ ಅಮೂಲ್ಯ ಜೀವನವನ್ನ ಕೈ ಚೆಲ್ಲುವ ಮೂಲಕ ತನ್ನ ಅವನತಿಯನ್ನು ತಾನೇ ಕರೆದುಕೊಂಡು ದುರಂತ ಅಂತ್ಯವಾಗುತ್ತಿದ್ದಾನೆ.

ಇದಕ್ಕೊಂದು ಸ್ಪಷ್ಟ ನಿದರ್ಶನ ಕೆಲವೆ ದಿನಗಳ ಹಿಂದೆ ಕುಟುಂಬದಲ್ಲಿ ನಡೆದ ಇಬ್ಬರು ಮಕ್ಕಳ ಕೊಂದು ದಂಪತಿ ಆತ್ಮಹತ್ಯೆ ಪ್ರಕರಣವೇ ಸಾಕ್ಷಿ.ನ್ ಅದೊಂದು ಮುದ್ದಾದ ಸಂಸಾರ… ಮನೆಯ ಹಿರಿಯಾಳು ಅಂದರೆ 33 ವರ್ಷದ ಅವಿನಾಶ್ ಒಬ್ಬ ಕಾರು ಚಾಲಕರು, ಮಡದಿ ಹತ್ತಾರು ಮಕ್ಕಳನ್ನು ತಿದ್ದಿ ಬುದ್ದಿ ಹೇಳುವ ಶಿಕ್ಷಕಿ ಮಮತಾಗೆ ಕೇವಲ 30 ವರ್ಷ, ಇವರಿಬ್ಬರದ್ದು ಸುಂದರ ಸಂಸಾರ ಎಂಬುದಕ್ಕೆ ಸಾಕ್ಷಿ ಮುದ್ದಾದ 5 ವರ್ಷದ ಆಧೀಯ ಎಂಬ ಮಗಳು ಹಾಗೂ ಮುದ್ದು ಕಂಗಳ ಅನಯಾ ಎಂಬ 3 ವರ್ಷದ ಮಗಳು ಸೇರಿದ ಕುಟುಂಬ.

ಮುದ್ದಾದ ಮಕ್ಕಳ ಭವಿಷ್ಯಕ್ಕಾಗಿ ತನ್ನೂರಾದ ಕಲಬುರ್ಗಿ ಬಿಟ್ಟು ಇಬ್ಬರೂ ಕನಸಿನ ಬುತ್ತಿ ಹೊತ್ತು ಬಂದಿದ್ದು ಮಾಯಾನಗರಿ ಬೆಂಗಳೂರಿನ ಯಲಹಂಕ ತಾಲ್ಲೂಕಿನ ಸಿಂಗನಾಯಕನಹಳ್ಳಿ ಗ್ರಾಮಕ್ಕೆ. ಇಲ್ಲಿನ ಹೊರವಲಯದ ಯಡಿಯೂರಪ್ಪ ನಗರದ ಪುಟ್ಟ ಮನೆಯೊಂದನ್ನ ಬಾಡಿಗೆಗೆ ಪಡೆದು ತಾನಾಯ್ತು ತನ್ನ ಕೆಲಸ ಆಯ್ತು ಅಂತ ಆ ಕಡೆ ಅವಿನಾಶ್ ಸುರಕ್ಷಿತವಾಗಿ ನಿಗದಿತ ಸಮಯಕ್ಕೆ ತಕ್ಕಂತೆ ಸ್ಥಳಕ್ಕೆ ಸೇರಿಸುವ ಡ್ರೈವಿಂಗ್ ಕೆಲಸಕ್ಕೆ ಹೋದ್ರೆ, ಇತ್ತ ಮಮತಾ ಗಂಡನಿಗೆ ಸರಿಸಮನಾಗಿ ಖಾಸಗಿ ಶಾಲೆಯಲ್ಲಿ ಹತ್ತಾರು ಮಕ್ಕಳಿಗೆ ಜೀವನ ಕಟ್ಟುವ ಸಮರ್ಥ ಕೆಲಸ ಮಾಡ್ತಾ ಇದ್ರು.

ಎಲ್ಲವೂ ಹೀಗೆ ನಡೆದಿದ್ರೆ ಬೇರೆಯವರಿಗೆ ಮಾದರಿಯಾಗಬೇಕಿದ್ದ ಕುಟುಂಬ ಇಂದಿನ ಟ್ರಾಜಿಡಿ ಸ್ಟೋರಿ ಆಗ್ತಾ ಇರಲಿಲ್ಲ. ಇವರ ಜೀವನ ಹೀಗೆ ಸಾಗ್ತಾ ಸಾಗ್ತಾ ಇಬ್ಬರು ಮಕ್ಕಳ ನಿರ್ವಹಣೆ, ಮನೆ, ಸಾಂಸಾರಿಕ ಹೊಣೆಗಾರಿಕೆ ಹೆಚ್ಚಾಯ್ತೇ ಹೊರತು ದುಡಿಮೆ ಪ್ರಮಾಣದಲ್ಲಿ ವ್ಯತ್ಯಾಸ ಆಗಲಿಲ್ಲ. ಮಕ್ಕಳ ಜೊತೆ ಊರಿನ ಜವಾಬ್ದಾರಿ ಅವಿನಾಶ್ ಮೇಲೆ ಹೆಚ್ಚಾಗ್ತಾ ಹೋಯ್ತು. ಜವಾಬ್ದಾರಿಗಳ ಏರಿಳಿತ ನಿಭಾಯಿಸಲು ಅವಿನಾಶ್ ಮೊರೆ ಹೋಗಿದ್ದು ಕ್ರೆಡಿಟ್ ಕಾರ್ಡ್ಗೆ.

ಕ್ರೆಡಿಟ್ ಕಾರ್ಡ್ ಬಳಸುತ್ತಾ ಬಿಲ್ ಪಾವತಿ ಬಗ್ಗೆ ಗಮನ ಹರಿಸದ ಅವಿನಾಶ್ ಸಿಕ್ಕ ಸಿಕ್ಕ ಹಾಗೆ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿ ಮಾಡಿ ದಿನದಿಂದ ದಿನಕ್ಕೆ ಆಂತರಿಕ ಸಾಲ ಹೆಚ್ಚಾಗುತ್ತಾ ಹೋದಂತೆ ಅಳತೆ ಮೀರಿದ ಜೀವನದ ಹಾದಿಯಲ್ಲಿ ಸಾಗಿ ಬಂದಿರುವುದು ಅರಿವಾಗುವಷ್ಟರಲ್ಲಿ ತುಂಬಾ ದೂರ ಸಾಗಿ ಸಾಲದ ಶೂಲದಲ್ಲಿ ಸಿಲುಕಿ ಆಗಿತ್ತು.

ಒಂದೆಡೆ ದುಡಿದ ಹಣ ಬ್ಯಾಂಕಿಗೆ ಬರುವಷ್ಟರಲ್ಲಿ ಕ್ರೆಡಿಟ್ ಕಾರ್ಡ್ ಸಾಲಕ್ಕೆ ವಜಾ ಆಗುತ್ತಿತ್ತು. ಅದರಿಂದ ಕೈ ಸಾಲಗಳು ಹೆಚ್ಚಾಗುತ್ತಾ ಹೋದವು. ಇದರೊಂದಿಗೆ ಮಾನಸಿಕ ಹಿಂಸೆ, ಮನೆಯಲ್ಲಿ ಅಶಾಂತಿ. ಪ್ರತಿದಿನ ಜಗಳ, ಕಾದಾಟಗಳು ಮಿತಿ ಮೀರಿ ಮನೆಯ ನೆಮ್ಮದಿಯೇ ಸರ್ವನಾಶವಾಗಿ ಹೋಗಿತ್ತು.

ಎಷ್ಟು ತೀರಿಸಿದರೂ ತೀರದ ಕ್ರೆಡಿಟ್ ಕಾರ್ಡ್ ಬಿಲ್‌ಗಳಿಂದ ಬೇಸತ್ತಿದ್ದ ಪತ್ನಿ ಮಮತಾ ಆವೇಶದ ಕೈಗೆ ಬುದ್ದಿ ಕೊಟ್ಟು ಮುದ್ದಾದ ತನ್ನದೆ ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿ, ತಾನೂ ವಿಷ ಸೇವನೆ ಮಾಡಿ ಸಾವನ್ನಪ್ಪಿದ್ದರು. ಇದನ್ನ ಕಂಡ ಅವಿನಾಶ್ ಆಪಾದನೆ ತನ್ನ ಮೇಲೆ ಬರಬಹುದೆಂದೋ, ಇಲ್ಲಾ ಸಮಾಜಕ್ಕೆ ಹೆದರಿಯೋ ಅಥವಾ ಮನನೊಂದೋ ನೇಣಿನ ಕುಣಿಕೆಗೆ ಕೊರಳೊಡ್ಡಿ ಅಮೂಲ್ಯ ಜೀವ- ಜೀವನ ಕಳೆದುಕೊಂಡಿದ್ದಾರೆ.

ಅವಶ್ಯಕತೆ ಮೀರಿದ ಜೀವನ ಪದ್ದತಿ, ಅತಿಯಾದ ಆತ್ಮವಿಶ್ವಾಸ ಈ ಕುಟುಂಬ ಆತ್ಮಹತ್ಯೆಗೆ ಕಾರಣವಾಗಿ ಬಾಳಿ ಬದುಕಬೇಕಿದ್ದ ಹಸುಗೂಸುಗಳೊಂದಿಗೆ ಕ್ರೆಡಿಟ್‌ನಿಂದ ಸಿಕ್ಕಿದ್ದ ಜೀವನ ಕಾರ್ಡ್ನಿಂದ ಕಳೆದುಕೊಂಡಿದ್ದು ಮಾತ್ರ ಇಡೀ ಮನುಕುಲವೆ ಮರುಕ ಪಡುವಂತೆ ಮಾಡಿದ್ದು ಸುಳ್ಳಲ್ಲ.

RELATED ARTICLES

Latest News