Sunday, September 8, 2024
Homeರಾಜ್ಯಮಾದಕ ವ್ಯಸನಿಗಳಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ : ಗೃಹಸಚಿವ ಪರಮೇಶ್ವರ್‌

ಮಾದಕ ವ್ಯಸನಿಗಳಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ : ಗೃಹಸಚಿವ ಪರಮೇಶ್ವರ್‌

ಬೆಂಗಳೂರು, ಜೂ.26- ದೇಶದಲ್ಲಿ 5 ಕೋಟಿಗೂ ಹೆಚ್ಚು ಜನ ಮಾದಕ ವ್ಯಸನಕ್ಕೆ ಅಂಟಿಕೊಂಡಿದ್ದು, ಇದರಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಆತಂಕ ವ್ಯಕ್ತಪಡಿಸಿದರು.ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಪೊಲೀಸ್‌‍ ಇಲಾಖೆಯು ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ವ್ಯಸನ ಮತ್ತು ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವಿಶ್ವದೆಲ್ಲೆಡೆ ಮಾದಕ ದ್ರವ್ಯ ಆಧುನಿಕ ಪಿಡುಗು ಆಗಿದ್ದು, ಯುವ ಸಮುದಾಯವನ್ನೇ ಹಾಳು ಮಾಡುತ್ತಿದೆ. ಮಾದಕ ವಸ್ತುಗಳ ವ್ಯಸನದ ಸಮಸ್ಯೆಯನ್ನು ಅರ್ಥೈಸಿಕೊಂಡ ವಿಶ್ವಸಂಸ್ಥೆಯು 1987ರಲ್ಲಿ ಮಾದಕ ವಸ್ತು ವಿರೋಧಿ ದಿನವನ್ನು ಜೂ.26ರಂದು ಆಚರಿಸಲು ನಿರ್ಣಯಿಸಿತು. ಮಾದಕ ದ್ರವ್ಯ ಸಮಾಜಕ್ಕೆ ದೊಡ್ಡ ರೋಗವಾಗಿ ಅಂಟಿಕೊಳ್ಳುತ್ತಿದ್ದು, ಯುವ ಪೀಳಿಗೆ ಸಂಕಷ್ಟಕ್ಕೆ ಸಿಲುಕದಂತೆ ಜಾಗೃತಿ ಮೂಡಿಸಬೇಕಿದೆ ಎಂದರು.

ಭಾರತವು ಮಾದಕ ವಸ್ತುಗಳ ಸಮಸ್ಯೆಯಲ್ಲಿ ಸಿಲುಕುತ್ತಿದೆ. 5 ಕೋಟಿ ಜನ ಮಾದಕ ವ್ಯಸನಕ್ಕೆ ಅಂಟಿಕೊಂಡಿದ್ದಾರೆ. ಯುವಕರು ಹಾಳಾದರೆ, ದೇಶ ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ. ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಬಹಳ ಎಚ್ಚರಿಕೆಯಿಂದ ದೇಶದ ಮುಂದಿನ ಭವಿಷ್ಯವನ್ನು ನೋಡಿಕೊಳ್ಳಬೇಕಿದೆ ಎಂದು ಹೇಳಿದರು.

ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚುವಾಗ 17 ರಿಂದ 20 ವರ್ಷದೊಳಗಿನವರೇ ಭಾಗಿಯಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ತಪ್ಪಿತಸ್ಥರನ್ನು ತಪಾಸಣೆಗೆ ಒಳಪಡಿಸಿದಾಗ ಮಾದಕ ವ್ಯಸನಿಯಾಗಿದ್ದರು ಎಂಬುದು ಗೊತ್ತಾಗುತ್ತಿದೆ. ಮಾದಕ ವ್ಯಸನದಿಂದ ಸಮಾಜಕ್ಕೆ ಅಪಾಯವಿದ್ದು, ಪಾಲಕರು ತಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಹೆಚ್ಚು ಜಾಗೃತಿ ಮೂಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಡ್ರಗ್‌್ಸ ಮುಕ್ತ ಕರ್ನಾಟಕ ನಿರ್ಮಾಣದ ಘೋಷಣೆ ಮಾಡಿದೆ. ಸಂಪೂರ್ಣವಾಗಿ ಡ್ರಗ್ಸ್ ಮಟ್ಟ ಹಾಕುವ ನಿಟ್ಟಿನಲ್ಲಿ ಇಲಾಖೆಯು ಯುದ್ಧವನ್ನೇ ಸಾರಿದೆ. 40 ಕೋಟಿ ರೂ. ಮೌಲ್ಯದ ಡ್ರಗ್‌್ಸ ನಾಶಪಡಿಸಲಾಗಿದ್ದು, 10 ಟನ್‌ ಗಾಂಜಾ ಸುಟ್ಟು ಹಾಕಲಾಗಿದೆ. ಇಷ್ಟೊಂದು ಪ್ರಮಾಣದ ಡ್ರಗ್‌್ಸ ಯುವಕರ ಕೈಸೇರಿದ್ದರೆ ಎಷ್ಟು ಕುಟುಂಬಗಳು ಹಾಳಾಗುತ್ತಿದ್ದವೋ ಎಂದು ಆತಂಕ ವ್ಯಕ್ತಪಡಿಸಿದರು.

ಡ್ರಗ್‌್ಸನಿಂದ ದೂರ ಇರುತ್ತೇವೆ ಎಂದು ಪ್ರತಿಯೊಬ್ಬರೂ ಸಂಕಲ್ಪ ಮಾಡಿಕೊಳ್ಳಬೇಕು. ಐಟಿ ಕಂಪನಿಗಳು ಕೈಗಾರಿಕೆಗಳು ಡ್ರಗ್ಸ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಹೇಳಿದರು.

ನಗರ ಪೊಲೀಸ್‌‍ ಆಯುಕ್ತ ಬಿ.ದಯಾನಂದ್‌ ಮಾತನಾಡಿ, ಪ್ರತಿ ವರ್ಷ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ದಿನಾಚರಣೆ ನಡೆಸಲಾಗುತ್ತದೆ. ಈ ವರ್ಷ `ಸಾಕ್ಷಿ ಅಸ್ಪಷ್ಟ ನಿಯಂತ್ರಣ ಅವಶ್ಯ’ ಧ್ಯೇಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ರಾಜ್ಯವನ್ನು ಮಾದಕವ್ಯಸನ ಮುಕ್ತಗೊಳಿಸಲು ದೃಢ ಸಂಕಲ್ಪದೊಂದಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾದಕ ವ್ಯಸನದ ವಿರುದ್ಧವಾಗಿ ಜಾಗೃತಿ ಪ್ರಾತಿಕ್ಷಿಕೆಗಳು ನಡೆದವು. ನಿರಂತರ ಕಾರ್ಯಾಚರಣೆಯಿಂದಾಗಿ ವಶಪಡಿಸಿಕೊಳ್ಳಲಾಗಿರುವ 42 ಕೋಟಿ ರೂ. ಮೌಲ್ಯದ 1,227 ಕೆಜಿ ಪ್ರಮಾಣದ ಗಾಂಜಾ, ಕೊಕೈನ್‌ನಂತಹ ಮಾದಕ ವಸ್ತುಗಳನ್ನು ನಾಶಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ. ಕೆ.ಗೋವಿಂದರಾಜ್‌, ಶಾಸಕ ರಿಜ್ವಾನ್‌ ಅರ್ಷದ್‌, ರಾಜ್ಯ ಪೊಲೀಸ್‌‍ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಸಿಐಡಿ ವಿಭಾಗದ ಡಿಜಿಪಿ ಡಾ. ಎಂ.ಎ.ಸಲೀಂ, ಎಡಿಜಿಪಿ ಪ್ರಣಬ್‌ ಮೋಹಾಂತಿ, ಆದರ್ಶ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಯಶಂಕರ್‌ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News