ಬೆಂಗಳೂರು,ಜ.27- ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದ್ದಾರೆ. ನಗರದ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಜೊತೆ ಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಸಿದ ವೇಳೆ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು 59 ಸಾವಿರ ಕೋಟಿ ರೂ. ಸಾಲ ನೀಡಿವೆ. ತಮ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಲು ಸಾಮರ್ಥ್ಯ ಮೀರಿ ಸಾಲ ನೀಡಿವೆ. ಸಾಲ ನೀಡುವಾಗ ಸಾಲ ಪಡೆದವರ ಆರ್ಥಿಕ ಸಾಮರ್ಥ್ಯವನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಕೂಡ ತಮ ವ್ಯವಹಾರವನ್ನು ನಿಲ್ಲಿಸಬೇಕಾದಂತಹ ಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಚಾರವಾಗಿ ಇತ್ತೀಚೆಗೆ ಸಭೆ ನಡೆಸಿದ್ದರು. ಮುಂದುವರೆದ ಭಾಗವಾಗಿ ಇಂದು ಹಣಕಾಸು ಇಲಾಖೆಯ ವ್ಯವಹಾರಗಳ ಕಾರ್ಯದರ್ಶಿ ಅವರೊಂದಿಗೆ ಸಂಜೆ ಮತ್ತೊಂದು ಸುತ್ತಿನ ಸಭೆ ನಡೆಸಿ ಮುಖ್ಯಮಂತ್ರಿ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಜೊತೆಗೆ ಸಭೆ ನಡೆಸಿ ಸಾಲ ವಸೂಲಾತಿಗೆ ಆರ್ಬಿಐ ನಿಗದಿಪಡಿಸಿರುವ ಮಾದರಿ ಕಾರ್ಯಾಚರಣೆಯನ್ನು ಪಾಲನೆ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಐಪಿಸಿ ಸೆಕ್ಷನ್ಗಳ ಬಳಕೆ ಮಾಡಿ ಪ್ರಕರಣ ದಾಖಲಿಸಿ ಒಂದೆರಡು ಪ್ರಕರಣಗಳು ದಾಖಲಾದರೆ ಮೈಕ್ರೋ ಫೈನಾನ್‌್ಸ ಕಂಪನಿಗಳು ತಮಷ್ಟಕ್ಕೆ ತಾವು ದಾರಿಗೆ ಬರುತ್ತವೆ ಎಂದರು.
ಈ ನಡುವೆ ಮಿತಿಮೀರಿದ ಸಾಲದ ವ್ಯವಹಾರವನ್ನು ಮೈಕ್ರೋ ಫೈನಾನ್ಸ್ ಕಂಪನಿಗಳು ನಡೆಸುತ್ತಿವೆ. ಆರ್ಥಿಕ ಸಾಮರ್ಥ್ಯವನ್ನು ಮೀರಿ ಸಾಲ ನೀಡಲಾಗುತ್ತಿದೆ. ಒಂದೊಂದು ಕುಟುಂಬಕ್ಕೆ 2-3 ಸಾಲಗಳನ್ನು ನೀಡಲಾಗುತ್ತಿದೆ. ಸಾಲದ ಗರಿಷ್ಠ ಮಿತಿ 2 ಲಕ್ಷ ರೂ.ಗಳಿದ್ದರೂ, 5 ಲಕ್ಷ, 6 ಲಕ್ಷ ರೂ.ಗಳನ್ನು ಸಾಲ ನೀಡಲಾಗಿದೆ. ಇದರಿಂದಾಗಿ ಮರು ಪಾವತಿ ಸಾಮರ್ಥ್ಯ ಕುಗ್ಗುತ್ತಿದೆ ಎಂದು ವಿಷಾದಿಸಿದರು.
ಇಂದು ಸಭೆಯ ಬಳಿಕ ಜಿಲ್ಲಾಧಿಕಾರಿಗಳು ತಕ್ಷಣವೇ ಜಿಲ್ಲೆಯಲ್ಲಿರುವ ಅನಧಿಕೃತ ಮೈಕ್ರೋ ಫೈನಾನ್‌್ಸ ಕಂಪನಿಗಳ ಮುಖ್ಯಸ್ಥರ ಜೊತೆ ತುರ್ತು ಸಭೆ ನಡೆಸಬೇಕು. ಹಣಕಾಸು ಇಲಾಖೆಯಿಂದ ಆರ್ಬಿಐನ ಮಾರ್ಗಸೂಚಿಯ ಆದೇಶವನ್ನು ಜಿಲ್ಲಾಡಳಿತಕ್ಕೆ ಒದಗಿಸಲಾಗುತ್ತದೆ. ಅದರ ಕುರಿತು ಕಂಪನಿಗಳಿಗೆ ಮನವರಿಕೆ ಮಾಡಿಕೊಡಬೇಕು. ಮುಖ್ಯಮಂತ್ರಿಯವರು ಬೆಂಗಳೂರಿನಲ್ಲಿ ಒಂದು ಸುತ್ತಿನ ಸಭೆ ನಡೆಸಿ ಈಗಾಗಲೇ ಸೂಚನೆ ನೀಡಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲೂ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಕಂಪನಿಗಳು ಆಕ್ರಮಣಕಾರಿಯಾಗಿ ತಮ ಸಾಲ ವಹಿವಾಟನ್ನು ನಡೆಸುತ್ತಿವೆ. ಸಾಮರ್ಥ್ಯಕ್ಕನುಗುಣವಾಗಿ ಸಾಲ ನೀಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಮಿತಿಮೀರಿದ ವಹಿವಾಟು ಸಾಲ ಮರುಪಾವತಿಗೆ ತೊಂದರೆ ಉಂಟುಮಾಡುತ್ತಿದೆ. ಹೀಗಾಗಿ ನಾಳೆ ಮೈಕ್ರೋ ಫೈನಾನ್ಸ್ ಕಂಪನಿಗಳು ಕೂಡ ನಷ್ಟ ಅನುಭವಿಸುತ್ತವೆ ಎಂದು ಎಚ್ಚರಿಕೆ ನೀಡಿದರು.
ಈಗ ಅನಿವಾರ್ಯವಾಗಿ ರಾಜ್ಯಸರ್ಕಾರ ಮಧ್ಯಪ್ರವೇಶಿಸಬೇಕಾಗಿದೆ. ಈಗಿನ ವಾತಾವರಣದಲ್ಲಿ ಗ್ಲೌಸ್ ಹಾಕಿಕೊಂಡು ಮೃದುವಾಗಿ ಪರಿಸ್ಥಿತಿ ನಿಭಾಯಿಸಲು ನಮಗೆ ಗೊತ್ತಾಗುತ್ತಿಲ್ಲ. ದಡಬಡ ಎಂದು ಆಕಡೆ ನಾಲ್ಕು ಬಾರಿ ದೊಣ್ಣೆ ಬೀಸಿದರೆ ಜನ ಸಾಲ ಮರುಪಾವತಿಯನ್ನು ನಿಲ್ಲಿಸುತ್ತಾರೆ. ಆಗ ಮೈಕ್ರೋ ಫೈನಾನ್ಸ್ ವಲಯವೇ ಕುಸಿದುಹೋಗುತ್ತದೆ ಎಂದರು.
ಮೈಕ್ರೋ ಫೈನಾನ್ಸ್ ಕಂಪನಿಗಳು ಕುಸಿಯಬಾರದು. ಜನರಿಗೆ ಇವುಗಳ ಅಗತ್ಯವಿದೆ. ಆದರೆ ನಿಯಮ ಮೀರಿ ವ್ಯವಹಾರ ಮಾಡಿ, ತಮಷ್ಟಕ್ಕೆ ತಾವು ಅಪಾಯ ಮಾಡಿಕೊಂಡು ಜನರಿಗೂ ತೊಂದರೆ ಕೊಡುತ್ತಿವೆ. ಇದಕ್ಕೆ ಈ ವಾರವೇ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.