ಹಾಸನ,ಅ.25-ನಗರದ ಶ್ರೀ ಹಾಸನಾಂಬ ದೇವಿ ಹಾಗೂ ಸಿದ್ದೇಶ್ವರ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು 3,68,12,275 ರೂ. ಸಂಗ್ರಹವಾಗಿದೆ ಎಂದು ದೇಗುಲ ಆಡಳಿತಾಧಿಕಾರಿ ಮಾರುತಿ ತಿಳಿಸಿದರು.
ನಗರದ ತೇರಾಪಂಥ್ ಸಮುದಾಯ ಭವನದಲ್ಲಿ ನಿನ್ನೆ ಹುಂಡಿ ಎಣಿಕೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಟಿಕೆಟ್ ಹಾಗೂ ಲಾಡು ಮಾರಾಟದಿಂದ 21,91,75,052ರೂ. ಹಾಗೂ ಹುಂಡಿಯಿಂದ 3,68,12,275 ರೂ. ಸೇರಿದಂತೆ ಒಟ್ಟು 25,59,87,327 ರೂ.ಹಣ ಸಂಗ್ರಹವಾಗಿದೆ ಎಂದರು.
ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾಮಹೋತ್ಸವದಲ್ಲಿಯೇ ಇದು ದಾಖಲೆ ಪ್ರಮಾಣದ ಆದಾಯ ಗಳಿಕೆಯಾಗಿದ್ದು ಉಸ್ತುವಾರಿ ಸಚಿವರ ಶಿಸ್ತುಬದ್ಧ ಆಡಳಿತ ಮತ್ತು ಹೆಚ್ಚಿನ ವಿಶೇಷ ಪಾಸ್ ವಿತರಣೆಗೆ ಕಡಿವಾಣ ಕಾರಣದಿಂದ ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ಆದಾಯ ಬಂದಿದೆ.
ಅಲ್ಲದೆ ಕಳೆದ ಬಾರಿ 9 ದಿನ ಮಾತ್ರ ದರ್ಶನ ವ್ಯವಸ್ಥೆ ಇತ್ತು ಈಬಾರಿ 13 ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು ಆದ್ದರಿಂದ ಆದಾಯ ಹೆಚ್ಚಾಗಿದೆ ಎಂದರು.
ಕಾಣಿಕೆಯಾಗಿ ಹುಂಡಿಯಲ್ಲಿ 75 ಗ್ರಾಂ ಚಿನ್ನದ ಆಭರಣಗಳು ದೊರೆತಿದ್ದು, 1 ಕೆಜಿ 58 ಗ್ರಾಂ ಬೆಳ್ಳಿಯ ದೀಪ, ಗೆಜ್ಜೆ , ನಾಣ್ಯ, ಬೆಳ್ಳಿಯ ಬಾರ್ ,ಉಂಗುರ , ಸೇರಿದಂತೆ ಇತರೆ ಆಭರಣಗಳು ದೊರಕಿದೆ.ಹುಂಡಿಯಲ್ಲಿ ಇಂಡೋನೇಷ್ಯಾ ,ಮಾಲ್ಡಿಂಗ್್ಸ, ಅಮೇರಿಕಾ , ಸೌದಿ ಅರೇಬಿಯ, ಯುಎಇ ಸೇರಿದಂತೆ ಇತರೆ ದೇಶದ ಕರೆನ್ಸಿ ಸೇರಿದಂತೆ ಚಲಾವಣೆಯಲ್ಲಿ ಇಲ್ಲದ ಭಾರತದ 500, 1000 ಮುಖಬೆಲೆಯ ನೋಟುಗಳನ್ನು ಭಕ್ತರು ಹಾಕಿದ್ದಾರೆ.
ಹುಂಡಿ ಎಣಿಕೆ ವೇಳೆ ಭಕ್ತರ ನಾನಾ ಮನವಿ ಪತ್ರಗಳು ದೊರಕಿದ್ದು ,ದೇವಸ್ಥಾನದ ಬ್ಯಾಂಕ್ ಖಾತೆ ಹೊಂದಿರುವ ಕೆನರಾ ಬ್ಯಾಂಕ್ನ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿಗಳು 25ಕ್ಕೂ ಹೆಚ್ಚು ಎಣಿಕೆ ಯಂತ್ರಗಳೊಂದಿಗೆ ಬೆಳಗ್ಗೆಯಿಂದಲೂ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
300ಕ್ಕೂ ಹೆಚ್ಚು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.ಶ್ರೀ ಸಿದ್ದೇಶ್ವರ ಸ್ವಾಮಿ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದ್ದು ಸುಮಾರು 15,17,785 ರೂ. ಕಾಣಿಕೆ ಸಂಗ್ರಹವಾಗಿದೆ ಇದನ್ನು ಪ್ರತ್ಯೇಕ ಖಾತೆಯಲ್ಲಿ ಇರಿಸಲಾಗುವುದು ಎಂದರು.
