Tuesday, September 17, 2024
Homeಬೆಂಗಳೂರುಕಸ ವೀಲೆವಾರಿ ಸಂಸ್ಥೆಯಿಂದ ಕೋಟಿ ಕೋಟಿ ಕಿಕ್‌ಬ್ಯಾಕ್‌ : ಎನ್‌.ಆರ್‌.ಆರ್‌ ಗಂಭೀರ ಆರೋಪ

ಕಸ ವೀಲೆವಾರಿ ಸಂಸ್ಥೆಯಿಂದ ಕೋಟಿ ಕೋಟಿ ಕಿಕ್‌ಬ್ಯಾಕ್‌ : ಎನ್‌.ಆರ್‌.ಆರ್‌ ಗಂಭೀರ ಆರೋಪ

ಬೆಂಗಳೂರು,ಜು.16– ಕಸದಲ್ಲಿ ಹಣ ಮಾಡೋದಕ್ಕೆ ಮುಂದಾಗಿರುವ ರಾಜ್ಯ ಪ್ರಭಾವಿ ಸಚಿವರೊಬ್ಬರು ನಗರದಲ್ಲಿ ಹೊಸ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಜಾರಿಗೆ ತಂದು ಬ್ಲಾಕ್‌ ಲಿಸ್ಟ್‌‍ ನಲ್ಲಿ ಇರೋ ಒಂದೇ ಸಂಸ್ಥೆಗೆ 30 ವರ್ಷಗಳ ಕಾಲ ಸುಮಾರು 45 ಸಾವಿರ ಕೋಟಿಗೆ ಗುತ್ತಿಗೆ ನೀಡುವ ಮೂಲಕ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಗಂಭೀರ ಆರೋಪ ಮಾಡಿದ್ದಾರೆ.

ಬ್ಲಾಕ್‌ ಲಿಸ್ಟ್‌ನಲ್ಲಿ ಇರುವ ರಾಮ್ಕಿ ಸಂಸ್ಥೆಗೆ ಕಸದ ಗುತ್ತಿಗೆ ನೀಡುವುದನ್ನು ತಡೆ ಹಿಡಿಯುವ ಮೂಲಕ ನಗರದ ಹಿತ ಕಾಪಡಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ನಗರದ 225 ವಾರ್ಡ್‌ಗಳ ಕಸ ವಿಲೇವಾರಿಗೆ ಹೈದರಾಬಾದ್‌ ಮೂಲದ ರಾಮ್ಕಿ ಸಂಸ್ಥೆಗೆ 30 ವರ್ಷಗಳ ಕಾಲ ಸುಮಾರು 45 ಸಾವಿರ ಕೋಟಿ ರೂಪಾಯಿ ಗಳ ಗುತ್ತಿಗೆ ನೀಡೋದಕ್ಕೆ ಬೆಂಗಳೂರು ಉಸ್ತುವಾರಿ ಸಚಿವರು ಮುಂದಾಗಿದ್ದಾರೆ. ಈಗಾಗಲೇ ಬ್ಲಾಕ್‌ ಲಿಸ್ಟ್‌ನಲ್ಲಿ ಇರೋ ರಾಮ್ಕಿ ಸಂಸ್ಥೆಗೆ ಮತ್ತೆ ಟೆಂಡರ್‌ ನೀಡುವ ಮೂಲಕ ಬಾರಿ ಮೊತ್ತದ ಕಿಕ್‌ ಬ್ಯಾಕ್‌ ಪಡೆಯಲಾಗುತ್ತಿದೆ ಎಂದು ಪತ್ರದಲ್ಲಿ ರಮೇಶ್‌ ಗಂಭೀರ ಆರೋಪ ಮಾಡಿದ್ಧಾರೆ.

ಸದ್ಯ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆಂದು ಪ್ರಸ್ತುತ ವರ್ಷಕ್ಕೆ ಸುಮಾರು . 450 ರಿಂದ 510 ಕೋಟಿ ರೂಪಾಯಿಗಳಷ್ಟು ಹಣವನ್ನು ವೆಚ್ಛ ಮಾಡುತ್ತಿದ್ದು, ಪ್ರಸ್ತುತ ಪಾಲಿಕೆಯು ಪ್ರತೀ ಟನ್‌ ತ್ಯಾಜ್ಯದ ಸಂಗ್ರಹಣೆ ಮತ್ತು ಸಾಗಣೆಕೆಗೆ 1,300/- ರೂ ವೆಚ್ಚ ಮಾಡುತ್ತಿದೆ. ಆದರೆ, ಹೊಸ ಕರಡು ಪ್ರತಿಯಲ್ಲಿ ಒಂದು ಟನ್‌ ತ್ಯಾಜ್ಯದ ಸಂಗ್ರಹ ಮತ್ತು ಸಾಗಣೆ ಕಾರ್ಯಕ್ಕೆ . 2,343/- ರಷ್ಟು ಹಣ ನಿಗದಿ ಮಾಡಲಾಗಿದ ಇದರ ಮೂಲಕ ನಾಗರಿಕರ ತೆರಿಗೆ ಹಣ ಲೂಟಿ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಸ ವಿಲೇವಾರಿಗೆ ಸಂಬಂಧಿಸಿದಂತೆ ಉದ್ದೇಶಿತ ನಾಲ್ಕು ಪ್ಯಾಕೇಜ್‌ ಗಳಿಗೆ ಮಂಡೂರು, ಟೆರ್ರಾಫಾರಂ. ಗೊಲ್ಲಹಳ್ಳಿ ಹಾಗೂ ಬಿಡದಿ ಪ್ರದೇಶಗಳಲ್ಲಿ ಪಾಲಿಕೆ ಗುರುತಿಸಿರುವ ತಲಾ 100 ಎಕರೆಗಳಷ್ಟು ವಿಸ್ತೀರ್ಣದ ಸ್ಥಳಗಳನ್ನು ಪಾಲಿಕೆ ಮತ್ತು ರಾಜ್ಯ ಸರ್ಕಾರವು ತನ್ನ ಖಜಾನೆಯಿಂದಲೇ ಹಣವನ್ನು ಪಾವತಿಸಿ ಕ್ರಯಕ್ಕೆ ಪಡೆದು, ನಂತರ ಆ ಸ್ಥಳಗಳಲ್ಲಿ ತ್ಯಾಜ್ಯ ನಿರ್ವಹಣೆ ಕಾರ್ಯಕ್ಕೆ ಅಗತ್ಯವಿರುವ ಎಲ್ಲಾ ವಿಧದ ಮೂಲಭೂತ ಸೌಲಭ್ಯಗಳನ್ನು ತನ್ನ ಹಣದಿಂದಲೇ ಕಲ್ಪಿಸಿಕೊಡಲು ಸರ್ಕಾರವು ಮುಂದಾಗಿದೆ.

ಈ ರೀತಿ ಸರ್ಕಾರವು ಏಕೀಕತ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಯನ್ನು ಜಾರಿಗೆ ತರುವ ಮೂಲಕ 30 ವರ್ಷಗಳ ಗುತ್ತಿಗೆಯನ್ನು ಕಪ್ಪು ಪಟ್ಟಿ ಗೆ ಸೇರಿಸಲ್ಪಟ್ಟಿರುವ ರಾಮ್ಕಿ ಸಂಸ್ಥೆ ಗೆ ನೀಡಲು ಹೊರಟಿರುವುದು ದುರದೃಷ್ಟಕರ ಎಂದು ಅವರು ಜರಿದಿದ್ದಾರೆ.

30 ವರ್ಷಗಳ ಅವಧಿಯಲ್ಲಿ ಸದರಿ ಗುತ್ತಿಗೆದಾರರಿಗೆ 45,000 ಕೋಟಿ ರೂ. ಗಳಷ್ಟು ಬಹತ್‌ ಪ್ರಮಾಣದ ಸಾರ್ವಜನಿಕರ ಹಣವನ್ನು ನೀಡುವ ಮೂಲಕ ಹತ್ತಾರು ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ಕಮಿಷನ್‌ ರೂಪದಲ್ಲಿ ಪಡೆಯಲು ಹೊರಟಿರುವ ತಮ ಸರ್ಕಾರದ ಕೆಲವು ಭ್ರಷ್ಟರಿಂದಾಗಿ, ಬೆಂಗಳೂರು ಮಹಾನಗರವು ಮುಂದೆಂದಿಗೂ ಚೇತರಿಸಿಕೊಳ್ಳಲಾಗದಂತಹ ಆರ್ಥಿಕ ಹೊಡೆತವನ್ನು ನೀಡಲು ಹೊರಟಿದೆ ಅಂತ ಅರೋಪ ಮಾಡಿ ಸಿಎಂ ಗೆ ರಮೇಶ್‌ ದೂರು ನೀಡಿದ್ದಾರೆ.

RELATED ARTICLES

Latest News