ಬೆಂಗಳೂರು,ಮಾ.25- ಸಿವಿಲ್ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದಕ್ಕೆ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಏನು ಮಾತನಾಡಿದ್ದಾರೆ ಎಂಬುದಕ್ಕೆ ವಿಡಿಯೋ ಸಾಕ್ಷಿಯಿದೆ. ಬೇಕಿದ್ದರೆ ಅವರು ಮತ್ತೊಮ್ಮೆ ಯೂಟ್ಯೂಬ್ ಚಾನಲ್‌ಗೆ ಹೋಗಿ ತಾವು ಏನು ಹೇಳಿದ್ದೇವೆ ಎಂಬುದನ್ನು ಪರಿಶೀಲನೆ ಮಾಡಲಿ. ತಾನು ಹಾಗೆ ಹೇಳಿಯೇ ಇಲ್ಲ ಎಂದರೆ ಅದು ಭಂಡತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.
ಸತ್ಯ ಯಾವುದು ಸುಳ್ಳು ಯಾವುದು ಎಂದು ಇನ್ನೊಮ್ಮೆ ಡಿಕೆಶಿ ತಮ್ಮ ಸಂದರ್ಶನ ನೋಡಲಿ. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ? ಎಂದು ಪ್ರಶ್ನಿಸಿದರು. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಶಾಬಾನೋ ಪ್ರಕರಣದಲ್ಲೂ ಕಾಂಗ್ರೆಸ್ ನಡೆದುಕೊಂಡಿದೆ. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ. ಇದು ಕಾನೂನಿನಲ್ಲಿ ಅನುಭವಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ? ಗೊತ್ತಿದ್ದೂ ಸುಮ್ಮನಿದ್ದಾರೆ ಎಂದರೆ ಇದು ಓಲೈಕೆ
ರಾಜಕಾರಣ ಅಲ್ಲದೇ ಇನ್ನೇನು ಎಂದು ತರಾಟೆಗೆ ತೆಗೆದುಕೊಂಡರು.
ಡಿಕೆಶಿ ಅವರು ತಮ್ಮ ಮನಃಸ್ಥಿತಿ ಏನಿದೆಯೋ ಅದರಂತೆ ಸಂದರ್ಶನದಲ್ಲಿ ಮಾತಾಡಿದ್ದಾರೆ. ಸಂವಿಧಾನ ಬದಲಾವಣೆ ಹೇಳಿಕೆಗೆ ಜನಾಕ್ರೋಶ ಹೆಚ್ಚಾಗಿರುವುದಕ್ಕೆ ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಅವರ ಹೇಳಿಕೆ ಬಗ್ಗೆ ಅನುಮಾನವಿದ್ದರೆ ಈಗಲೂ ಯೂಟ್ಯೂಬ್ ನಲ್ಲಿ ಅವರ ಹೇಳಿಕೆ ಇದೆ. ಹೋಗಿ ನೋಡಲಿ. ಕಾಂಗ್ರೆಸ್ ನವರು ಸಂವಿಧಾನದಲ್ಲಿ ವಿರುದ್ಧ ಇರೋದೆಲ್ಲವನ್ನೂ ಸಮರ್ಥಿಸಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.
ಮೇಕೆದಾಟು ಯೋಜನೆಗೆ ಅವಕಾಶ ಇಲ್ಲ ಎಂಬ ತಮಿಳುನಾಡು ಮಂತ್ರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಡಿ.ಕೆ.ಶಿವಕುಮಾರ್ ವಿಮಾನ ಹತ್ತಿ ತಮಿಳುನಾಡಿಗೆ ಹೋಗಿದ್ದು ನೋಡಿದರೆ ಎಲ್ಲೋ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿಬಿಡುತ್ತಾರೆ ಅಂದುಕೊಂಡಿದ್ದೆವು. ಇವರ ಸ್ನೇಹ ಇರುವುದು ಕೇವಲ ಬಿಜೆಪಿ ವಿರೋಧಿಸಲು ಎಂದಾಯ್ತಲ್ಲ? ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರವನ್ನು ಒಪ್ಪಿಸಲಿ ಎಂದು ವ್ಯಂಗ್ಯವಾಡಿದರು.
ಹನಿಟ್ರ್ಯಾಪ್ ವಿಚಾರದಲ್ಲಿ ದೂರು ಮತ್ತು ತನಿಖೆಯ ವಿಳಂಬವನ್ನು ಖಂಡಿಸಿದ ಅವರು, ಕೆ.ಎನ್.ರಾಜಣ್ಣ ಹಿರಿಯ ಸಚಿವರು. ವಿಧಾನಸಭೆಯಲ್ಲಿ ಅವರು ಕೊಟ್ಟ ಹೇಳಿಕೆ ಆಧರಿಸಿಯೇ ಸರ್ಕಾರ ದೂರು ಕೊಡಬೇಕಿತ್ತು. ಇನ್ನು ಮುಖ್ಯಮಂತ್ರಿ ಕೂಡ ಉನ್ನತ ಮಟ್ಟದ ತನಿಖೆ ಮಾಡುತ್ತೇವೆ ಅಂದಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ರಾಜಣ್ಣ ಅವರ ಸದನದ ಹೇಳಿಕೆಗೆ ಬೆಲೆ ಇಲ್ಲದೇ ಎಂದು ಪ್ರಶ್ನಿಸಿದರು.
ಇದರಲ್ಲಿ 48 ಜನರು ಇದ್ದಾರೆ. ಜಡ್ಜ್‌ಗಳೂ ಇದ್ದಾರೆ ಎಂದು ರಾಜಣ್ಣ ಹೇಳಿದ್ದರು. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಹನಿಟ್ರ್ಯಾಪ್ ಪ್ರಕರಣವನ್ನು ತನಿಖೆಗೆ ಕೊಡಲಿ ಎಂದು ಸವಾಲು ಹಾಕಿದರು.