ಬೆಳಗಾವಿ,ಡಿ.20- ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರ ಪ್ರಕರಣವನ್ನು ಬೆಳಗಾವಿ ಜೆಎಂಎಫ್‌ಸಿ ನ್ಯಾಯಾಲಯ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದೆ.
ಈ ಪ್ರಕರಣವು ನಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಆದೇಶ ನೀಡಿರುವ ಐದನೇ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಸ್ಪರ್ಶ ಎಂ.ಡಿಸೋಜ ಅವರು ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸಿದರು.
ಇದರ ಬೆನ್ನಲ್ಲೇ ಸಿ.ಟಿ.ರವಿಯವರನ್ನು ಪೊಲೀಸರು ಬೆಳಗಾವಿಯಿಂದ ಬೆಂಗಳೂರಿಗೆ ಕರೆತರುತ್ತಿದ್ದಾರೆ. ನಿಮಗೆ ಸಂಬಂಧಿಸಿದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಎಂದು ನ್ಯಾಯಾಧೀಶರು ಸಿ.ಟಿ.ರವಿ ಪರ ವಕೀಲರಿಗೆ ಸೂಚನೆ ನೀಡಿದರು. ಇತ್ತ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿ.ಟಿ.ರವಿ ಪರ ವಕೀಲ ಶ್ರೀನಿವಾಸರಾವ್ ಅವರು ನ್ಯಾಯಾಲಯಕ್ಕೆ ಮೇಲನವಿ ಅರ್ಜಿ ಸಲ್ಲಿಸಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಅರ್ಜಿ ವಿಚಾರಣೆ ನಡೆಯಲಿದ್ದು, ರವಿ ಅವರ ಜಾಮೀನಿನ ಭವಿಷ್ಯ ನ್ಯಾಯಾಲಯ ನಿರ್ಧರಿಸಲಿದೆ. ಇದಕ್ಕೂ ಮುನ್ನ ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬೆಳಿಗ್ಗೆ ರವಿ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಮಧ್ಯಾಹ್ನ 3 ಗಂಟೆ ನಂತರ ಸರ್ಕಾರಿ ಪರ ವಕೀಲರು ವಾದ ಮಂಡಿಸಿದ ನಂತರ ಜಾಮೀನು ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿತ್ತು. ಅಷ್ಟರೊಳಗೆ ಪ್ರಕರಣವು ನಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತು.
ಇದಕ್ಕೂ ಮುನ್ನ ರವಿ ಪರ ವಾದ ಮಂಡಿಸಿದ ವಕೀಲ ಎಂ.ಬಿ.ಜಿರಾಲೆ ಅವರು ಸುದೀರ್ಘ ವಾದ ಮಂಡಿಸಿ ತಮ ಕಕ್ಷಿದಾರ ಸಿ.ಟಿ.ರವಿಗೆ ಮಧ್ಯಂತರ ಜಾಮೀನು ನೀಡಬೇಕು. ಪೊಲೀಸರು ಬಂಧಿಸಿರುವುದು ಕಾನೂನುಬಾಹಿರ. ಅವರ ವಿರುದ್ಧ ಎಫ್‌ಐಆರ್ ಹಾಕಿರುವುದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಸ್ಪರ್ಶ ಎಂ.ಡಿಸೋಜ ಅವರಿಗೆ ಮನವಿ ಮಾಡಿದರು.
ಪೊಲೀಸರು ಮೃಗಗಳಂತೆ ವರ್ತಿಸಿದ್ದಾರೆ. ಅವರಿಗೆ ಜೀವಬೆದರಿಕೆಯಿದೆ. ಯಾವ ಕಾರಣಕ್ಕಾಗಿ ಬಂಧಿಸುತ್ತೇವೆ ಎಂಬ ಮಾಹಿತಿಯನ್ನೇ ನೀಡಿಲ್ಲ. ನನ್ನ ಕಕ್ಷಿದಾರರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗಿದೆ. ವಾಚ್ ಹಾಗೂ ಮೊಬೈಲ್‌ಗಳನ್ನು ಕಿತ್ತುಕೊಂಡು ಮೂರು ಜಿಲ್ಲೆಗಳನ್ನು ಸುತ್ತಾಡಿಸಿದ್ದಾರೆ. ಇದರ ಅಗತ್ಯವೇನಿತ್ತೆಂದು ಪ್ರಶ್ನೆ ಮಾಡಿದರು.
ಎನ್‌ಸಿಆರ್ ಹಾಕಿದ ಮೇಲೆ ಯಾವುದೇ ಆರೋಪಿಯನ್ನೂ ಬಂಧಿಸುವಂತಿಲ್ಲ. ಇಲ್ಲಿ ಪೊಲೀಸರು ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರ ಬಂಧನ ಮತ್ತು ಎಫ್‌ಐಆರ್ ಕಾನೂನುಬಾಹಿರವಾಗಿದೆ. ಅಷ್ಟಕ್ಕೂ ರವಿಯವರು ಸಾಮಾನ್ಯ ವ್ಯಕ್ತಿಯಲ್ಲ. ಅವರು ರೌಡಿ ಹಿನ್ನಲೆಯನ್ನೂ ಹೊಂದಿಲ್ಲ. ಅವರೊಬ್ಬ ಜನಪ್ರತಿನಿಧಿ.
ಸೆಕ್ಷನ್ 480ರಡಿ ಜಾಮೀನು ಸಲ್ಲಿಸಲು ಅವಕಾಶವಿದೆ. ಅವರ ಬಂಧನಕ್ಕೆ ಸಭಾಪತಿಗಳ ಅನುಮತಿಯನ್ನು ಪಡೆಯಬೇಕು. ಪೊಲೀಸರು ಇಲ್ಲಿ ಯಾವುದೇ ಪ್ರಕ್ರಿಯೆಗಳನ್ನೂ ಪಾಲಿಸಿಲ್ಲ. ಎಲ್ಲವೂ ಮೂರನೇ ವ್ಯಕ್ತಿಯ ನಿರ್ದೇಶನದ ಮೇರೆಗೆ ನಡೆದಿರುವಂತೆ ಕಾಣುತ್ತದೆ.ನ್ಯಾಯಾಲಯ ಈ ಅಂಶಗಳನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಬೇಕೆಂದು ಮನವಿ ಮಾಡಿದರು.
ಈ ಘಟನೆ ನಡೆದಿರುವುದು ಸಾಮಾನ್ಯ ಸ್ಥಳದಲ್ಲಿ ಅಲ್ಲ. ಅದು ವಿಧಾನಪರಿಷತ್‌ನಲ್ಲಿ. ಈ ಘಟನೆ ನಡೆದ ನಂತರ ಸಭಾಪತಿ ಸ್ಥಾನದಲ್ಲಿದ್ದವರು ಪ್ರತಿಯೊಂದೂ ದಾಖಲೆಗಳನ್ನು ವಿವರವಾಗಿ ಪರಿಶೀಲಿಸಿದ್ದಾರೆ. ಅವರು ಯಾವುದೇ ರೂಲಿಂಗ್ ನೀಡದಿರುವಾಗ ಬಂಧಿಸಿರುವುದು ಸರಿಯಲ್ಲ. ಹೀಗಾಗಿ ಇದೊಂದು ವಿಶೇಷ ಪ್ರಕರಣವಾಗಿದ್ದು, ತಕ್ಷಣವೇ ತಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡಬೇಕೆಂದು ಕೋರಿದರು.
ಸೆಕ್ಷನ್ 480 ಅನ್ನು ಓದಿದ ವಕೀಲ ಜಿರಾಲೆ ಅವರು ಸುಪ್ರೀಂಕೋರ್ಟ್‌ನ ಆದೇಶವನ್ನು ನ್ಯಾಯಾಧೀಶರ ಗಮನಕ್ಕೆ ತಂದರು.ಸೆಕ್ಷನ್ 41ನ್ನು ಸಹ ಉಲ್ಲೇಖ ಮಾಡಿದ ಅವರು, ಈ ಪ್ರಕರಣದಲ್ಲಿ ಪೊಲೀಸರು ವಿವೇಚನೆ ಬಳಸದೆ ಯಾರದೋ ನಿರ್ದೇಶನದಂತೆ ಕೆಲಸ ಮಾಡಿದ್ದಾರೆ. ಇದೇನು ಪ್ರಜಾಪ್ರಭುತ್ವವೋ? ಅಥವಾ ನಾವು ಸರ್ವಾಧಿಕಾರದಲ್ಲಿದ್ದೇವೆಯೇ ಎಂದು ಬೇಸರ ವ್ಯಕ್ತಪಡಿಸಿದರು.
ಆರೋಪಿ ವಿರುದ್ಧ ಎಫ್‌ಐಆರ್ ಹಾಕಿದ ಮೇಲೆ ಅದರ ಪ್ರತಿಯನ್ನು ಸಂಬಂಧಪಟ್ಟವರಿಗೆ ಕೊಡಬೇಕು. ಪೊಲೀಸರು ಗುರುವಾರ 6.30ಕ್ಕೆ ಸುವರ್ಣಸೌಧದಿಂದ ಹೊರಬರುತ್ತಿದ್ದಂತೆ ಬಂಧಿಸಿದ್ದಾರೆ. ಅವರನ್ನು ಎಲ್ಲಿಗೆ ಕರೆದೊಯ್ಯಲಾಗುತ್ತದೆ ಎಂಬ ಮಾಹಿತಿಯನ್ನೂ ನೀಡಲಿಲ್ಲ. ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಭೇಟಿ ಮಾಡಲು ಹೋದಾಗ ಅದಕ್ಕೂ ಅವಕಾಶ ಕೊಟ್ಟಿಲ್ಲ. ಅಂದರೆ ಇವರ ಬಂಧನವು ದುರುದ್ದೇಶಪೂರಕವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ನನ್ನ ಕಕ್ಷಿದಾರರು ದೇಶ ಬಿಟ್ಟು ಹೋಗುವುದಿಲ್ಲ. ನೀವು ಜಾಮೀನು ನೀಡದಿದ್ದರೆ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು. ವಾದವನ್ನು ಆಲಿಸಿದ ನ್ಯಾಯಾಧೀಶರು ಸರ್ಕಾರಿ ಪರ ವಕೀಲರಿಗೆ ವಾದ ಮಂಡಿಸಲು ಅವಕಾಶ ನೀಡಿ ಪ್ರಕರಣದ ವಿಚಾರವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ಇದಕ್ಕೂ ಮುನ್ನ ಸಿ.ಟಿ.ರವಿಯವರನ್ನು ಹಿರೇಬಾಗೆವಾಡಿ ಪೊಲೀಸರು ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಅಶೋಕ್, ಬಿ.ವೈ.ವಿಜಯೇಂದ್ರ, ಎನ್.ರವಿಕುಮಾರ್, ಮಹೇಶ್ ತೆಂಗಿನಕಾಯಿ ಮತ್ತಿತರರು ಧೃಡಿಗೆಡದಂತೆ ಧೈರ್ಯ ತುಂಬಿದರು.