ನವದೆಹಲಿ, ಮಾ.26– ಹೆಚ್ಚಿನ ಸಂಖ್ಯೆಯ ಮರಗಳನ್ನು ಕಡಿಯುವುದು ಮನುಷ್ಯರನ್ನು ಕೊಲ್ಲುವುದಕ್ಕಿಂತ ಕೆಟ್ಟದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾತ್ರವಲ್ಲ, ಅಕ್ರಮವಾಗಿ ಕತ್ತರಿಸಿದ ಪ್ರತಿ ಮರಕ್ಕೆ ಒಬ್ಬ ವ್ಯಕ್ತಿಗೆ 1 ಲಕ್ಷ ರೂ.ಗಳ ದಂಡ ವಿಧಿಸಿದೆ.
ಸಂರಕ್ಷಿತ ತಾಜ್ ಟ್ರೆಪೀಜಿಯಂ ವಲಯದಲ್ಲಿ 454 ಮರಗಳನ್ನು ಕಡಿದು ಹಾಕಿದ ವ್ಯಕ್ತಿಯ ಮನವಿ ಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪರಿಸರ ವಿಷಯದಲ್ಲಿ ಯಾವುದೇ ಕರುಣೆ ಇರಬಾರದು. ಹೆಚ್ಚಿನ ಸಂಖ್ಯೆಯ ಮರಗಳನ್ನು ಕಡಿಯುವುದು ಮನುಷ್ಯನನ್ನು ಕೊಲ್ಲುವುದಕ್ಕಿಂತ ಕೆಟ್ಟದು ಎಂದು ನ್ಯಾಯಪೀಠ ಹೇಳಿದೆ.
ಅನುಮತಿಯಿಲ್ಲದೆ ಕಡಿಯಲಾದ 454 ಮರಗಳು ಸೃಷ್ಟಿಸಿದ ಹಸಿರು ಹೊದಿಕೆಯನ್ನು ಮತ್ತೆ ಪುನರುತ್ಪಾದಿಸಲು ಅಥವಾ ಮರುಸೃಷ್ಟಿಸಲು ಕನಿಷ್ಠ 100 ವರ್ಷಗಳು ಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಥುರಾ-ವೃಂದಾವನದ ದಾಲ್ಮಿಯಾ ಫಾರ್ಮಾನಲ್ಲಿ ಶಿವಶಂಕರ್ ಅಗರ್ವಾಲ್ ಎಂಬುವವರು 454 ಮರಗಳನ್ನು ಕಡಿದು ಹಾಕಿದ್ದಕ್ಕಾಗಿ ಪ್ರತಿ ಮರಕ್ಕೆ 1 ಲಕ್ಷ ರೂ.ಗಳ ದಂಡ ವಿಧಿಸಲು ಶಿಫಾರಸು ಮಾಡಿದ ಕೇಂದ್ರ ಉನ್ನತಾಧಿಕಾರ ಸಮಿತಿಯ (ಸಿಇಸಿ) ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಅಗರ್ವಾಲ್ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ತಪ್ಪನ್ನು ಒಪ್ಪಿಕೊಂಡಿದ್ದಾರೆ ಆದರೆ ದಂಡದ ಮೊತ್ತವನ್ನು ಕಡಿಮೆ ಮಾಡಲು ನ್ಯಾಯಾಲಯ ನಿರಾಕರಿಸಿದೆ ಎಂದು ಹೇಳಿದರು.