ಬೆಂಗಳೂರು,ಡಿ.1- ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫೆಂಗಲ್ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದು, ನಿನ್ನೆಯಿಂದ ತುಂತುರು ಮಳೆ ಆರಂಭವಾಗಿದ್ದು, ಇನ್ನೂ ಮೂರು ದಿನ ಮುಂದುವರೆಯುವ ಮುನ್ಸೂಚನೆಗಳಿವೆ.
ಚಂಡಮಾರುತದ ಪರಿಣಾಮದಿಂದ ಆಗಾಗ್ಗೆ ತಂಪಾದ ಮೇಲೈ ಗಾಳಿ ಹಾಗೂ ತುಂತುರು ಮಳೆ ಬೀಳುವುದರಿಂದ ಹಗಲಿನಲ್ಲೂ ಚಳಿಯ ತೀವ್ರತೆ ಹೆಚ್ಚಾಗಿದೆ.ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಚಂಡಮಾರುತವು ತಮಿಳುನಾಡಿನ ಕಡಲೂರು, ಪಾಂಡಿಚೇರಿ ಬಳಿ ಇದ್ದು, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೂರು ದಿನಗಳ ಕಾಲ ಹಗುರದಿಂದ ಸಾಧಾರಣವಾಗಿ ವ್ಯಾಪಕ ಮಳೆಯಾಗಿದೆ. ಕರಾವಳಿಯ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನ ಅಲ್ಲಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೋಲಾರ ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿ. 2 ಮತ್ತು 3 ರಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಳೆ ಹೆಚ್ಚಿನ ಪ್ರಮಾಣದ ಮಳೆ ಈ ಭಾಗದಲ್ಲಿ ಬೀಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಚಂಡಮಾರುತದಿಂದ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಆದರೆ ಅದರ ನೇರ ಪರಿಣಾಮ ರಾಜ್ಯದ ಮೇಲೆ ಅಷ್ಟಾಗಿ ಆಗುವುದಿಲ್ಲ. ಕೆಲವೆಡೆ ಸಾಧಾರಣ ಮಳೆ ಬೀಳಬಹುದು. ಚದುರಿದಂತೆ ಅಲ್ಲಲ್ಲಿ ತುಂತುರು ಮಳೆ ಮುಂದುವರೆಯಲಿದೆ.
ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ನಿನ್ನೆಯಿಂದ ಆರಂಭವಾದ ತುಂತುರು ಮಳೆ ಇಂದೂ ಕೂಡ ಮುಂದುವರೆದಿದೆ. ಇಂದು ಮುಂಜಾನೆ ಬೆಂಗಳೂರಿನ ಹಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಒಟ್ಟಾರೆ ಮಳೆಗಿಂತ ತಂಪಾದ ವಾತಾವರಣಕ್ಕೆ ಜನರು ಹೈರಾಣಾಗಿದ್ದಾರೆ.