Thursday, July 4, 2024
Homeರಾಜ್ಯರೀಮಲ್‌ ಚಂಡಮಾರುತ ಎಫೆಕ್ಟ್ : ಕರಾವಳಿ-ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆ ಸಾಧ್ಯತೆ

ರೀಮಲ್‌ ಚಂಡಮಾರುತ ಎಫೆಕ್ಟ್ : ಕರಾವಳಿ-ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆ ಸಾಧ್ಯತೆ

ಬೆಂಗಳೂರು, ಮೇ 24- ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ರೀಮಲ್‌ ಚಂಡಮಾರುತದ ಪರಿಣಾಮ ರಾಜ್ಯದ ಮೇಲೆ ಅಷ್ಟಾಗಿ ಆಗುವುದಿಲ್ಲ, ಆದರೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇದರಿಂದ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ.

ಪಶ್ಚಿಮಬಂಗಾಳ ಹಾಗೂ ಬಾಂಗ್ಲಾ ದೇಶದ ಕಡೆಗೆ ಚಂಡಮಾರುತ ಸಾಗುತ್ತಿರುವುದರಿಂದ ಕರ್ನಾಟಕದ ಮೇಲೆ ಅದರ ನೇರ ಪರಿಣಾಮ ಉಂಟಾಗುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕೆಲವೆಡೆ ಚದುರಿದಂತೆ ಇನ್ನೆರೆಡು ದಿನ ಮಳೆಯಾಗಬಹುದು.

ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ಇಳಿಮುಖವಾಗಲಿದೆ. ಆದರೂ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಮುಂದುವರೆದಿದೆ. ಜನವರಿಯಿಂದ ಮಾರ್ಚ್‌ವರೆಗೆ ಪೂರ್ವ ಮುಂಗಾರು ಮಳೆ ಕೈಕೊಟ್ಟು ಆತಂಕವನ್ನು ಸೃಷ್ಟಿ ಮಾಡಿತ್ತು. ಆದರೆ ಮೇ ತಿಂಗಳಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಆತಂಕವನ್ನು ದೂರ ಮಾಡಿದೆ.

ವಾಡಿಕೆಗಿಂತ ಹೆಚ್ಚು ಮಳೆ ರಾಜ್ಯದಲ್ಲಾಗಿದ್ದು, ಮುಂಗಾರು ಮಳೆಯು ವಾಡಿಕೆ ಪ್ರಮಾಣದಲ್ಲಿ ಆಗಲಿದೆ ಎಂಬ ಮುನ್ಸೂಚನೆ ಇರುವುದರಿಂದ ರೈತ ಸಮುದಾಯದಲ್ಲಿ ಆಸೆ ಚಿಗುರೊಡೆದಿದೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿರುವುದರಿಂದ ನೈರುತ್ಯ ಮುಂಗಾರಿನ ಮೇಲೆ ಅಷ್ಟಾಗಿ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಆದರೂ ಇದರಿಂದ ಯಾವ ಪರಿಣಾಮ ಉಂಟಾಗಬಹುದು ಎಂಬುದನ್ನು ಕಾದುನೋಡಬೇಕಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕೆಲವೊಮೆ ಚಂಡಮಾರುತದ ಪರಿಣಾಮದಿಂದ ಮಳೆಯ ಪ್ರಮಾಣ ಹೆಚ್ಚಾದರೂ ಆಗಬಹುದು. ಸದ್ಯಕ್ಕಿರುವ ಹವಾಮಾನ ಮುನ್ಸೂಚನೆ ಪ್ರಕಾರ, ಮೇ ಅಂತ್ಯದ ವೇಳೆ ಮುಂಗಾರು ಕೇರಳ ಪ್ರವೇಶಿಸುವ ಸಾಧ್ಯತೆಗಳಿವೆ.ನಿರೀಕ್ಷೆಯಂತೆ ಮುಂಗಾರು ಆರಂಭವಾದರೆ ಭರದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಮಳೆಯ ಆಸರೆ ದೊರೆತಂತಾಗಲಿದೆ.

ಈಗಾಗಲೇ ಮಲೆನಾಡು, ಕರಾವಳಿ ಭಾಗದಲ್ಲಿ ಸಾಕಷ್ಟು ಮಳೆಯಾಗಿದೆ. ಕೇರಳದ ವಯನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಒಟ್ಟಾರೆ ಕಾವೇರಿ ಜಲನಯನ ಭಾಗದಲ್ಲಿನ ಜಲಾಶಯಗಳಿಗೆ ಒಳಹರಿವು ಪ್ರಾರಂಭವಾಗಿರುವುದು ಸದ್ಯದ ಮಟ್ಟಿಗೆ ನಿರಾಳವಾಗುವಂತೆ ಮಾಡಿದೆ.

RELATED ARTICLES

Latest News