Friday, November 22, 2024
Homeಇದೀಗ ಬಂದ ಸುದ್ದಿಈಶಾನ್ಯ ರಾಜ್ಯಗಳಲ್ಲಿ ರೆಮೆಲ್‌ ರುಧ್ರನರ್ತನ, 37ಮಂದಿ ಸಾವು, ಹಲವರ ನಾಪತ್ತೆ

ಈಶಾನ್ಯ ರಾಜ್ಯಗಳಲ್ಲಿ ರೆಮೆಲ್‌ ರುಧ್ರನರ್ತನ, 37ಮಂದಿ ಸಾವು, ಹಲವರ ನಾಪತ್ತೆ

ಕೋಲ್ಕತ್ತಾ, ಮೇ 29- ರೆಮಲ್‌ ಚಂಡಮಾರುತದಿಂದ ಉಂಟಾದ ಭಾರೀ ಮಳೆಗೆ ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಕನಿಷ್ಠ ಪಕ್ಷ 37 ಜನರು ಸಾವನ್ನಪ್ಪಿದ್ದಾರೆ. ಹತ್ತಾರು ಜನರು ನಾಪತ್ತೆಯಾಗಿದ್ದಾರೆ. ಮಳೆಯಿಂದ ಮನೆಗಳು ಧ್ವಂಸಗೊಂಡು ವಿದ್ಯುತ್‌ ತಂತಿಗಳು ನೆಲಕ್ಕುರುಳಿವೆ. ನೂರಾರು ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುವಂತಾಗಿದೆ. ಮಿಜೋರಾಂನಲ್ಲಿ ಅತಿ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ.

ರೆಮಲ್‌ ಚಂಡಮಾರುತವು ಮಿಜೋರಾಂನ ರಾಜಧಾನಿ ಐಜ್ವಾಲ್‌ನ ಮೆಲ್ತಮ್‌‍, ಹ್ಲಿಮೆನ್‌,ಫಾಲ್ಕಾವ್ ನ ಮತ್ತು ಸೇಲಂ ವೆಂಗ್‌ ಪ್ರದೇಶಗಳಲ್ಲಿ 27 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಪರಿಹಾರ ತಂಡಗಳು ಇದುವರೆಗೆ 27 ಮಂದಿಯ ಮೃತದೇಹಗಳನ್ನು ಹೊರತೆಗೆದಿದ್ದು, ನಗರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಲಾಲ್ದುಹೋಮ ಅವರು, ಮೃತರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್ಡಿಆರ್‌ಎಫ್‌)ಯಿಂದ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಚಂಡಮಾರುತದ ನಂತರ ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಅಸ್ಸಾಂನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 18 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ಶಾಲಾ ಬಸ್‌‍ ಮೇಲೆ ಮರ ಬಿದ್ದು 12 ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೆಮಲ್‌ ಚಂಡಮಾರುತದಿಂದ ಉಂಟಾದ ಭಾರೀ ಮಳೆಯು ನಾಗಾಲ್ಯಾಂಡ್‌ನಲ್ಲಿ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿದೆ. 40 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ರಾಜ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ರಾಜ್ಯದ ಅತ್ಯಂತ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮೇಘಾಲಯದಲ್ಲಿ ಭಾರೀ ಮಳೆ ಸುರಿದು ಇಬ್ಬರು ಸಾವನ್ನಪ್ಪಿದ್ದು, 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಜೈನ್ತಿಯಾ ಹಿಲ್‌್ಸನಲ್ಲಿ ಒಂದು ಸಾವು ಮತ್ತು ಪೂರ್ವ ಖಾಸಿ ಹಿಲ್ಸ್‌‍ ಜಿಲ್ಲೆಯಲ್ಲಿ ಕಾರು ಅಪಘಾತದಲ್ಲಿ ಮತ್ತೊಂದು ಸಾವು ವರದಿಯಾಗಿದೆ. ಈ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಒಟ್ಟು ಸಾವಿನ ಸಂಖ್ಯೆ 37ಕ್ಕೆ ಏರಿದೆ.

ತ್ರಿಪುರಾದಿಂದ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲವಾದರೂ, ರೆಮಲ್‌ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ 246 ಕುಟುಂಬಗಳ ಒಟ್ಟು 746 ಜನರು ರಾಜ್ಯದ ವಿವಿಧ ಭಾಗಗಳಲ್ಲಿ ತೆರೆಯಲಾದ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುವಂತಾಗಿದೆ.

ಚಂಡಮಾರುತದಿಂದ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದಲ್ಲಿ ಭಾನುವಾರ ಮಧ್ಯರಾತ್ರಿಯ ಸುಮಾರಿಗೆ ಭೂಕುಸಿತ ಉಂಟಾಗಿದೆ. ಕರಾವಳಿಯಾದ್ಯಂತ ಗಾಳಿಯ ವೇಗ ಗಂಟೆಗೆ 135 ಕಿ.ಮೀ. ಇದೆ. ವಿದ್ಯುತ್‌ ಸ್ಥಗಿತದಿಂದಾಗಿ ಲಕ್ಷಾಂತರ ಜನ ಪರದಾಡುವಂತಾಯಿತು.

RELATED ARTICLES

Latest News