Sunday, October 6, 2024
Homeಇದೀಗ ಬಂದ ಸುದ್ದಿ"ಮುಂಗಾರು ಮಳೆಯ ಮೇಲೆ ರೆಮೆಲ್‌ ಚಂಡಮಾರುತ ಪರಿಣಾಮ ಬೀರಲ್ಲ"

“ಮುಂಗಾರು ಮಳೆಯ ಮೇಲೆ ರೆಮೆಲ್‌ ಚಂಡಮಾರುತ ಪರಿಣಾಮ ಬೀರಲ್ಲ”

ಬೆಂಗಳೂರು, ಮೇ 25-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ರೆಮೆಲ್‌ ಚಂಡ ಮಾರುತದ ಪರಿಣಾಮ ನೈರುತ್ಯ ಮುಂಗಾರಿನ ಮೇಲೆ ಹೆಚ್ಚು ಉಂಟಾಗುವುದಿಲ್ಲ. ಒಡಿಸ್ಸಾ ಹಾಗೂ ಬಾಂಗ್ಲಾ ದೇಶದ ಕಡೆಗೆ ಚಲಿಸುತ್ತಿರುವುದರಿಂದ ಅದರ ನೇರ ಪರಿಣಾಮ ಮುಂಗಾರಿನ ಮೇಲೆ ಆಗುವುದಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್‌‍.ಪ್ರಕಾಶ್‌ ತಿಳಿಸಿದರು.

ರಾಜ್ಯದ ಮೇಲೆ ಚಂಡ ಮಾರುತದ ಪರಿಣಾಮವಿಲ್ಲ. ಆದರೆ, ಭಾಗಶಃ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಚದುರಿದಂತೆ ಮಳೆಯಾಗಬಹುದು. ನಾಲ್ಕೈದು ದಿನಗಳ ಕಾಲ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

ಮುಂಗಾರು ಮಳೆ ನಿರೀಕ್ಷೆಗಿಂತ ಮುಂಚೆಯೇ ಆಗಮಿಸುವ ಸಾಧ್ಯತೆಗಳಿವೆ. ಹೀಗಾಗಿ ಐದು ದಿನಗಳ ನಂತರ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಉತ್ತಮ ಮಳೆ ನಿರೀಕ್ಷಿಸಬಹುದಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಲಿದೆ. ಅಂದರೆ ಕರಾವಳಿ ಭಾಗದಲ್ಲಿ 100ರಿಂದ 150 ಮಿ.ಮೀ., ಮಲೆನಾಡು ಭಾಗದಲ್ಲಿ 100 ಮಿ.ಮೀ.ವರೆಗೆ, ಉತ್ತರ ಒಳನಾಡಿನಲ್ಲಿ 15ರಿಂದ 50 ಮಿ.ಮೀ. ಹಾಗೂ ದಕ್ಷಿಣ ಒಳನಾಡಿನಲ್ಲಿ 15ರಿಂದ 40 ಮಿ.ಮೀ.ನಷ್ಟು ಮಳೆಯಾಗುವ ಲಕ್ಷಣಗಳಿವೆ ಎಂದರು.

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿದ್ದರೂ ಅರಬ್ಬೀ ಸಮುದ್ರದಲ್ಲಿ ಮುಂಗಾರು ಮಳೆ ಆರಂಭಕ್ಕೆ ಪೂರಕ ವಾತಾವರಣಗಳು ನಿರ್ಮಾಣಗೊಂಡಿವೆ. ಇದರಿಂದ ಅವಧಿಗೂ ಮುನ್ನ ಹೆಚ್ಚು ಮಳೆ ನಿರೀಕ್ಷಿಸಬಹುದಾಗಿದೆ. ಈಗಾಗಲೇ ಪೂರ್ವ ಮುಂಗಾರು ಮಳೆ ಕಳೆದ ಎರಡು ವಾರಗಳಿಂದ ರಾಜ್ಯದ ಹಲವು ಕಡೆಗಳಲ್ಲಿ ಬಿದ್ದಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ ಎಂದು ಅವರು ತಿಳಿಸಿದರು.

RELATED ARTICLES

Latest News