ಹುಬ್ಬಳ್ಳಿ,ಡಿ.29- ದೇಗುಲದಲ್ಲಿ ಸಿಲಿಂಡರ್ ಸ್ಫೋಟಗೊಂಡ ಪ್ರಕರಣದಲ್ಲಿ ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಮೃತಪಟ್ಟಿದ್ದರು.
ಇಂದು ಮತ್ತಿಬ್ಬರ ಅಯ್ಯಪ್ಪ ಮಾಲಾಧಾರಿಗಳಾದ ಹುಬ್ಬಳ್ಳಿಯ ಹುಣಕಲ್ ನಿವಾಸಿ ಶಂಕರ್ ಚವ್ಹಾಣ್(29) ಹಾಗೂ ಮಂಜುನಾಥ್ ವಾಗೋಡೆ ಮೃತಪಟ್ಟಿದ್ದಾರೆ.ಬಾಲ್ಯದಲ್ಲಿ ತಂದೆ- ತಾಯಿಯನ್ನು ಕಳೆದುಕೊಂಡಿದ್ದ ಶಂಕರ್ ಚವ್ಹಾಣ್ ದೊಡ್ಡಮನ ಮನೆಯಲ್ಲಿ ವಾಸವಿದ್ದರು. ಅಯ್ಯಪ್ಪನ ವ್ರತ ಮಾಡಲು ಮೊದಲ ಬಾರಿ ಮಾಲೆ ಹಾಕಿದ್ದರು. ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ.
ಮೃತ ಮಂಜುನಾಥ್ 2ನೇ ವರ್ಷದ ಡಿಪ್ಲೊಮೊ ಓದುತ್ತಿದ್ದು, ಅಯ್ಯಪ್ಪ ವ್ರತ ಆಚರಿಸಲು ಮಾಲೆ ಹಾಕಿದ್ದರು. ತಡರಾತ್ರಿ ಶಂಕರ್ ಚವ್ಹಾಣ್ ಮೃತಪಟ್ಟರೆ, ಬೆಳಗ್ಗೆ ಮಂಜುನಾಥ್ ವಾಗೋಡೆ ಸಾವನ್ನಪ್ಪಿದ್ದಾರೆ. ಕಳೆದ 7 ದಿನಗಳಿಂದ ಇಲ್ಲಿನ ಕೆಎಂಸಿಎಐಆರ್ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡ ಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ ದ್ದಾರೆ.ಗಾಯಗೊಂಡ 9 ಜನರ ಪೈಕಿ ಆರು ಮಂದಿ ಮೃತಪಟ್ಟಿದ್ದು, ಇನ್ನುಳಿದ ಮೂವರಿಗೆ ಚಿಕಿತ್ಸೆ ಮುಂದುವರೆದಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಓರ್ವ ಮಾತ್ರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.ಹುಬ್ಬಳ್ಳಿಯ ಹುಣಕಲ್ನ ಅಚ್ಚವ್ವ ಕಾಲೋನಿಯಲ್ಲಿ ಡಿ.23 ರಂದು ಬೆಳಗಿನ ಜಾವ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಎಂದಿನಂತೆ ಅಯ್ಯಪ್ಪ ಸ್ವಾಮಿ ವ್ರತ ಮುಗಿಸಿ ಅಯ್ಯಪ್ಪನಿಗೆ ಪೂಜೆ ಸಲ್ಲಿಸಿ ನಿದ್ರೆಗೆ ಜಾರಿದ್ದರು. ಈ ಸಂದರ್ಭದಲ್ಲಿ ಓರ್ವ ಅಯ್ಯಪ್ಪ ಮಾಲಾಧಾರಿಯ ಕಾಲು ಗ್ಯಾಸ್ ಸಿಲಿಂಡರ್ಗೆ ತಾಗಿ ಉರುಳಿಬಿದ್ದ ಪರಿಣಾಮ ಗ್ಯಾಸ್ ಸೋರಿಕೆಯಾಗಿ ದೇವರಿಗೆ ಹಚ್ಚಿದ ದೀಪ ಉರಿಯುತ್ತಿದ್ದರಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಈ ಘಟನೆಯಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಕಿಮ್ಸೌ ಆಸ್ಪತ್ರೆಗೆ ದಾಖಲಿಸಲಾಗಿತ್ತು.