ಆನೇಕಲ್,ಜ.06- ಮನೆಯೊಂದರಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಿಲಿಂಡರ್‌ನಿಂದ ಅನಿಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡಿದ್ದು, ಸ್ಫೋಟದ ತೀವ್ರತೆಗೆ ಗೋಡೆಗಳು ಛಿದ್ರಗೊಂಡಿವೆ. ತಾಲ್ಲೂಕಿನ ಬೊಮಸಂದ್ರ ಪುರಸಭೆ ವ್ಯಾಪ್ತಿಯ ಕಿತ್ತಗಾನಹಳ್ಳಿ ಗ್ರಾಮದಲ್ಲಿನ ಕೃಷ್ಣಪ್ಪ ಬಡಾವಣೆಯ ಮನೆಯೊಂದರಲ್ಲಿ ಇಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಸಿಲಿಂಡರ್ ಸ್ಪೋಟ ಗೊಂಡಿದೆ.
ಸ್ಫೋಟದ ರಭಸಕ್ಕೆ ಮನೆಯಲ್ಲಿ ಇದ್ದ ಕೇರಳ ಮೂಲದ ಮೂವರ ಪೈಕಿ ಸುನೀಲ್ ಮತ್ತು ವಿಷ್ಣು ಎಂಬುವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.
ಕಟ್ಟಡದ ಮೊದಲನೇ ಮಹಡಿಯಲ್ಲಿ ಕೇರಳ ಮೂಲದ ಮೂವರು ಯುವಕರು ವಾಸವಾಗಿದ್ದರು. ಇಂದು ಬೆಳಗ್ಗೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದ್ದು, ಬಿಲ್ಡಿಂಗ್ ಸಂಪೂರ್ಣವಾಗಿ ಜಖಂಗೊಂಡಿದೆ.
ಜೊತೆಗೆ ಗೋಡೆಗಳು ಸೀಳಿಕೊಂಡು ಕೆಳಗೆ ಬಿದ್ದ ಪರಿಣಾಮ ಮನೆಯ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಹಾಗೂ ಕಾರು ಹಾನಿಗೊಂಡಿವೆ. ಸ್ಪೋಟದ ತೀವ್ರತೆಗೆ ಮನೆಯ ಕಿಟಕಿ, ಬಾಗಿಲು, ಗಾಜುಗಳು ಪೀಸ್ ಪೀಸ್ ಆಗಿವೆ.ಸ್ಫೋಟದ ಶಬ್ದ ಕೇಳಿ ಅಕ್ಕಪಕ್ಕದವರು ಮನೆಗಳಿಂದ ಹೊರಗೆ ಬಂದು ನೋಡುವಷ್ಟರಲ್ಲಿ ಸ್ಫೋಟಗೊಂಡಿದ್ದ ಮನೆ ಕೇವಲ ಪಿಲ್ಲರ್ ಅಷ್ಟೇ ಕಾಣಿಸುತ್ತಿತ್ತು.
ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸೂರ್ಯ ಸಿಟಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಲಿಂಡರ್ ಸ್ಫೋಟಕ್ಕೆ ನಿಖರ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಪೊಲೀಸರು ಹಾಗೂ ಅಗ್ನಿಶಾಮಕ ದಳ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ.