ಬೆಂಗಳೂರು, ಆ.15– ಪಾರದರ್ಶಕ ಚುನಾವಣೆ ವ್ಯವಸ್ಥೆಗೆ ಹಾನಿ ಮಾಡಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಧಕ್ಕೆಯುಂಟು ಮಾಡಿರುವವರ ವಿರುದ್ಧ ನಿರಂತರ ಹೋರಾಟದ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದ ಕಾರ್ಯಕರ್ತರಿಗೆ 5 ಶಪಥಗಳನ್ನು ಬೋಧಿಸಿದ್ದಾರೆ.79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮತಗಳ್ಳತನದ ಮೂಲಕ ದೇಶದ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿದರು.
ನಾವು ಧ್ವಜಾರೋಹಣ ನೆರವೇರಿಸಿ ರಾಷ್ಟ್ರಗೀತೆ ಹಾಡಿದರೆ ಸಾಲದು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ಮುಂದಿನ ಪೀಳಿಗೆಗೆ ಧೈರ್ಯವಾಗಿ ಹೇಳಬೇಕಿದೆ. ಇಲ್ಲವಾದರೆ ದೇಶ ದ್ರೋಹಿಗಳು ನಮಗೆ ದೇಶ ಪ್ರೇಮದ ಪಾಠ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾತಗಾಂಧೀಜಿ, ಜವಾಹರ್‌ಲಾಲ್‌ನೆಹರೂ, ಸರ್ದಾರ್‌ವಲ್ಲಭಭಾಯಿ ಪಟೇಲ್ ಅವರಂತಹ ಮಹಾನ್ ನಾಯಕರು ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದ್ದಾರೆ. ಆದರೆ ಕೆಲವು ದೇಶ ದ್ರೋಹಿಗಳು ದೇಶಕ್ಕೆ ಕಾಂಗ್ರೆಸ್‌ನ ಕೊಡುಗೆ ಏನು ಎಂದು ಪ್ರಶ್ನಿಸುತ್ತಿದ್ದು, ಮಹಾತಗಾಂಧೀಜಿ, ನೆಹರು ಅವರು ಸ್ವಾತಂತ್ರ್ಯ ಹೋರಾಟ ನಡೆಸಿಲ್ಲ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿದರು.
ನೆಹರೂ 3262 ದಿನ ಜೈಲಿನಲ್ಲಿದ್ದರು. ಅವರಂತೆ ದೇಶದ ಸ್ವಾತಂತ್ರ್ಯಕ್ಕಾಗಿ ತನು, ಮನ, ಧನ ಅರ್ಪಿಸಿದ ನೂರಾರು ನಾಯಕರು ಇದ್ದಾರೆ. ರಾಷ್ಟ್ರಗೀತೆ, ರಾಷ್ಟ್ರ ಧ್ವಜವನ್ನು ದೇಶಕ್ಕೆ ನೀಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಕಾಂಗ್ರೆಸ್‌ನ ಕೊಡುಗೆಗಳ ಬಗ್ಗೆಯೇ ಇಂದು ಮರೆಮಾಚಲಾಗುತ್ತಿದೆ. ಯುವಪೀಳಿಗೆಯಿಂದ ಸತ್ಯಾಂಶವನ್ನು ಮರೆಮಾಚಲಾಗುತ್ತಿದೆ. ಇದರ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
79ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತರು 5 ಶಪಥಗಳನ್ನು ಮಾಡಬೇಕು. ಪ್ರಜಾಪ್ರಭುತ್ವವನ್ನು ಉಳಿಸುತ್ತೇನೆ. ಸಂವಿಧಾನ ರಕ್ಷಿಸುತ್ತೇನೆ, ಚುನಾವಣೆ ಅಕ್ರಮ ಹಾಗೂ ಮತಗಳ್ಳತನ ತಡೆಯುತ್ತೇನೆ, ತೆರಿಗೆ ಅಸಮಾನತೆಯ ವಿರುದ್ಧ ಹೋರಾಟ ಮಾಡುತ್ತೇನೆ, ದೇಶದಲ್ಲಿ ಸರ್ವಾಧಿಕಾರವನ್ನು ತೊಲಗಿಸಿ ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇನೆ ಎಂಬ ಪ್ರಮಾಣಗಳನ್ನು ಕಾರ್ಯಕರ್ತರು ಕೈಗೊಳ್ಳಬೇಕೆಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಕ್ಕೂ, ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ರಾಜ್ಯದ ಈಸೂರು ದೇಶದಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯಗಳಿಸಿದ ಗ್ರಾಮ, ಬ್ರಿಟಿಷರನ್ನು ತೊಲಗಿಸಿತ್ತು. ಕಿತ್ತೂರುರಾಣಿ ಚೆನ್ನಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮಹಿಳೆ. 1939ರಲ್ಲಿ ಅಂಕೋಲಾದ ಹನುಮಂತರಾವ್ ಅವರು ಸತ್ಯಾಗ್ರಹವನ್ನು ನಡೆಸಿದರು ಎಂದು ಹಲವಾರು ಪ್ರಸಂಗಗಳನ್ನು ಉಲ್ಲೇಖಿಸಿದರು.
ರಾಜಕೀಯ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವಂತೆ ಮೋಸ ಮಾಡಿರುವವರು ಸಂವಿಧಾನ ವಿರೋಧಿಗಳಷ್ಟೇ ಅಲ್ಲ, ಜೀವ ವಿರೋಧಿಗಳು ಹಾಗೂ ಸಮಾಜ ಘಾತುಕರು ಎಂದು ಪರಿಗಣಿಸಬೇಕು. ಕಾಂಗ್ರೆಸ್ ಪಾರದರ್ಶಕ ಚುನಾವಣೆ ನಡೆಸಿತ್ತು. ಆದರೆ ಈಗ ಮತಗಳ್ಳತನದ ಮೂಲಕ ರಾಜಕೀಯ ಸ್ವಾತಂತ್ರ್ಯವನ್ನು ಬುಡಮೇಲು ಮಾಡಲಾಗುತ್ತಿದೆ. ಅದರ ಪರಿಣಾಮವನ್ನು ಕಾಂಗ್ರೆಸ್ ಅನುಭವಿಸಿದೆ ಎಂದು ವಿಷಾದಿಸಿದರು.
ಕಾಂಗ್ರೆಸ್ ನಾಯಕರು ಮತಗಳ್ಳತನದ ವಿರುದ್ಧ ಕರ್ನಾಟಕದಿಂದ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ದೇಶಾದ್ಯಂತ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಿವೆ. ಇದು ರಾಜಕೀಯ ವ್ಯವಸ್ಥೆಯಲ್ಲಿ ಹೊಸ ತಿರುವು ತಂದುಕೊಡಲಾಗಿದೆ ಎಂದು ಹೇಳಿದರು. ಕಳೆದ ಎರಡೂವರೆ ವರ್ಷಗಳ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಬಿಜೆಪಿ ಭಾವನೆಗಳ ಮೇಲೆ ರಾಜಕೀಯ ಮಾಡಿದರೆ, ಕಾಂಗ್ರೆಸ್ ಜನರ ಬದುಕಿನ ಮೇಲೆ ರಾಜಕೀಯ ಮಾಡುತ್ತಿದೆ ಎಂದರು.
ಬಿಬಿಎಂಪಿ, ಜಿಲ್ಲಾಪಂಚಾಯತ್, ತಾಲ್ಲೂಕು ಪಂಚಾಯತ್‌ಗಳು ಸೇರಿ ನಗರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ 6 ತಿಂಗಳ ಒಳಗೆ ಚುನಾವಣೆ ಮುಗಿಸಲು ಸರ್ಕಾರ ನಿರ್ಧಾರ ಮಾಡಿದೆ. 2028ಕ್ಕೆ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಪಕ್ಷದ ಕಾರ್ಯಕರ್ತರು ಪಣ ತೊಡಬೇಕು ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಸೇರಿದಂತೆ ಕಾಂಗ್ರೆಸ್‌ನ ಅನೇಕ ನಾಯಕರು ಭಾಗವಹಿಸಿದ್ದರು.