ಬೆಂಗಳೂರು,ಡಿ.7- ಬೆಳಗಾವಿ ವಿಧಾನಮಂಡಲದ ಅಧಿವೇಶನದಲ್ಲಿ ವಿರೋಧಪಕ್ಷಗಳಿಗೆ ಎದುರೇಟು ನೀಡಲು ಪೂರ್ವ ಸಿದ್ಧತೆಯ ಭಾಗವಾಗಿ ಕೋವಿಡ್ ಅಕ್ರಮಗಳ ಹಗರಣವನ್ನು ರಾಜ್ಯಸರ್ಕಾರ ಮತ್ತಷ್ಟು ಕೆಣಕಲು ಮುಂದಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿರುವ ಸಚಿವ ಸಂಪುಟದ ಉಪಸಮಿತಿಯ ಸಭೆ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದಿದ್ದು, ಹಗರಣಗಳ ಮತ್ತಷ್ಟು ಅಂಶಗಳನ್ನು ಪರಿಶೀಲನೆ ಗೊಳಪಡಿಸಿದೆ.
ಈಗಾಗಲೇ ನ್ಯಾಯಮೂರ್ತಿ ಮೈಕಲ್ ಖುನ್ಹಾ ವಿಚಾರದಲ್ಲಿ ಮಧ್ಯಂತರದ ವರದಿ ಸಲ್ಲಿಸಿದ್ದು, ಅದರ ಆಧಾರದ ಬಗ್ಗೆ ಎಸ್‌ಐಟಿ ತನಿಖೆ ಸೇರಿದಂತೆ ಹಲವು ಕ್ರಮಗಳನ್ನು ರಾಜ್ಯಸರ್ಕಾರ ಕೈಗೊಂಡಿದೆ. ಮಾರುಕಟ್ಟೆಯ ದರವನ್ನೂ ಮೀರಿ ಹೆಚ್ಚಿನ ಬೆಲೆಗೆ ಪಿಪಿಇ ಕಿಟ್ ಖರೀದಿ ಸೇರಿದಂತೆ ಹಲವು ಲೋಪಗಳನ್ನು ತನಿಖೆಗೊಳಪಡಿಸಿದೆ. ಪ್ರಕರಣದಲ್ಲಿ ಘಟಾನುಘಟಿ ನಾಯಕರ ಪಾತ್ರಗಳು ಕಂಡುಬಂದಿದ್ದು, ಹಿರಿಯ ಅಧಿಕಾರಿಗಳ ಒಳಗೊಳ್ಳುವಿಕೆಯೂ ಸೇರಿದೆ.
ಈ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಕಂಪನಿಗಳು ಪ್ರಭಾವ ಬೀರಿ ಕೋವಿಡ್ ಸಂದರ್ಭವನ್ನು ದುರುಪಯೋಗಪಡಿಸಿಕೊಂಡಿದ್ದು, ಕೋಟ್ಯಂತರ ರೂ. ಲೂಟಿ ಮಾಡಿದೆ ಎಂಬ ಆರೋಪಗಳಿವೆ.
ಬೆಳಗಾವಿ ಅಧಿವೇಶನದಲ್ಲಿ ವಿರೋಧಪಕ್ಷಗಳು ಮುಡಾ ಹಗರಣ, ವಕ್‌್ಫ ಅವಾಂತರ, ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ, ಬಳ್ಳಾರಿ ಜಿಲ್ಲೆಯಲ್ಲಿನ ಬಾಣಂತಿಯರ ಸಾವು ಸೇರಿದಂತೆ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿ ಬೀಳಲು ತಯಾರಾಗಿವೆ. ಇದಕ್ಕೆ ಪ್ರತಿತಂತ್ರವಾಗಿ ಕೋವಿಡ್ ಅಸ್ತ್ರ ಬಳಸಲು ರಾಜ್ಯಸರ್ಕಾರ ಮುಂದಾಗಿದೆ.
ಪ್ರಕರಣದಲ್ಲಿ ಮೈಕಲ್ ಕುನ್ಹಾ ನೀಡಿರುವ ವರದಿಯನ್ನು ಸಂಪೂರ್ಣವಾಗಿ ಅಧ್ಯಯನಕ್ಕೊಳಪಡಿಸಿದ್ದು, ಒಂದೊಂದೇ ಬಾಬ್ತಿನಲ್ಲಿ ಅವ್ಯವಹಾರವಾಗಿರುವುದನ್ನು ಖಚಿತಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ.
ಇಂದು ನಡೆದ ಸಭೆಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಶರಣ್ ಪ್ರಕಾಶ್ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.