Thursday, December 5, 2024
Homeರಾಜಕೀಯ | Politicsಕುತೂಹಲ ಕೆರಳಿಸಿದ ಡಿ.ಕೆ.ಶಿವಕುಮಾರ್ 'ತ್ಯಾಗ'ದ ಹೇಳಿಕೆ

ಕುತೂಹಲ ಕೆರಳಿಸಿದ ಡಿ.ಕೆ.ಶಿವಕುಮಾರ್ ‘ತ್ಯಾಗ’ದ ಹೇಳಿಕೆ

D.K. Shivakumar's 'sacrifice' statement aroused curiosity

ಬೆಂಗಳೂರು,ನ.26– ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಧಿಯನ್ನು ಎರಡೂವರೆ ವರ್ಷ ಮಾಡಲಾಗಿದೆ. ಅದೇ ರೀತಿ ಕೆಲವು ಸಚಿವರಿಗೂ ಸಂದೇಶ ನೀಡಿದ್ದೇವೆ. ಸದ್ಯಕ್ಕೆ ಈ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸೋನಿಯಾಗಾಂಧಿಯವರು ಪ್ರಧಾನಮಂತ್ರಿ ಪದವಿಯನ್ನು ತ್ಯಾಗ ಮಾಡಿದ ಸಂದರ್ಭದ ಕುರಿತು ವಿವರಣೆ ನೀಡಿದರು.

ಗ್ರಾಮಪಂಚಾಯಿತಿ ಅಧ್ಯಕ್ಷರನ್ನು ಒಂದು ವರ್ಷದ ಬಳಿಕ ರಾಜೀನಾಮೆ ಕೊಡಿಸಬೇಕಾದರೆ ಸಾಕಷ್ಟು ಸರ್ಕಸ್ ಮಾಡಬೇಕು. ಈಗ ಅವರ ಅಧಿಕಾರವಧಿ ಎರಡೂವರೆ ವರ್ಷ ಆಗಿದೆ. ಸಂಪುಟದ ಸಚಿವರಿಗೂ ಈ ಸಂದೇಶ ನೀಡಲಾಗಿದೆ ಎಂದು ಮುಗುಮಾಗಿ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರ ಹುದ್ದೆಯನ್ನೇ ಬಿಟ್ಟುಕೊಡದ ಕಾಲದಲ್ಲಿ ಪ್ರಧಾನಿ ಹುದ್ದೆಯನ್ನು ಸೋನಿಯಾಗಾಂಧಿ ತ್ಯಾಗ ಮಾಡಿದರು. ಮಹಾತಗಾಂಧೀಜಿ, ಇಂದಿರಾಗಾಂಧಿ, ರಾಜೀವ್ಗಾಂಧಿಯವರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ತಮಗೆ ವಿದ್ಯಾರ್ಥಿ ಜೀವನದಲ್ಲಿ ವಕೀಲರಾಗಬೇಕು ಎಂಬ ಆಕಾಂಕ್ಷೆಯಿತ್ತು. ಇಂದು ವಕೀಲರಾಗಿರುವ ಬಹಳಷ್ಟು ಮಂದಿ ತಮ್ಮ ಸಹಪಾಠಿಗಳು ಎಂದು ಸರಿಸಿಕೊಂಡರು.

ತಾವು ವಕೀಲರಾಗಿಲ್ಲ. ಈಗ ದಿನಬೆಳಗಾದರೆ ಇ.ಡಿ., ಸಿಬಿಐ, ಜಿಎಸ್ಟಿ ನೋಟೀಸ್ಗಳು ಬರುತ್ತಿವೆ. ಆ ನೋಟೀಸ್ಗಳನ್ನು ಓದಿ ನಿಭಾಯಿಸಿದರೆ ಸಾಕು ಎಂಬ ಕಾರಣಕ್ಕೆ ತಮ ಮಗನನ್ನು ಕಾನೂನು ಓದಿಸುತ್ತಿರುವುದಾಗಿ ಹಾಸ್ಯ ಚಟಾಕಿ ಹಾರಿಸಿದರು.

ಎಲ್ಲಾ ಧರ್ಮಗಳ ಗ್ರಂಥಗಳಿಗಿಂತಲೂ ಸಂವಿಧಾನ ಮಹತ್ವದ್ದಾಗಿದೆ. ಇಲ್ಲಿ ಎಲ್ಲಾ ಆಚರಣೆ ಹಾಗೂ ಸಮಾನತೆಗೆ ಅವಕಾಶ ಕಲ್ಪಿಸಲಾಗಿದೆ. ಹೋರಾಟ ಮಾಡದೇ ಇದ್ದರೂ ಪರವಾಗಿಲ್ಲ, ಮಾರಾಟವಾಗಬೇಡ ಎಂದು ಅಂಬೇಡ್ಕರ್ ಹೇಳಿದ್ದಾರೆ. ಜನ ಮಾರಾಟವಾಗಿಲ್ಲ. ಆದರೆ ದೊಡ್ಡ ದೊಡ್ಡ ನಾಯಕರು ಮಾರಾಟವಾಗಿದ್ದನ್ನು ನೋಡಿದ್ದೇವೆ ಎಂದರು.

140 ಕೋಟಿ ಜನರ ರಕ್ಷಾ ಕವಚ ಸಂವಿಧಾನವಾಗಿದೆ. ಇದನ್ನು ಬದಲಾವಣೆ ಮಾಡಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ಶ್ರೀಮತಿ ಇಂದಿರಾಗಾಂಧಿಯವರು ಸಮಾನತೆ ಮತ್ತು ಜಾತ್ಯತೀತತೆಯನ್ನು ಸೇರ್ಪಡೆ ಮಾಡಿದ್ದರು. ಅದನ್ನು ಕೆಲವರು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಕೋರ್ಟ್ ತನ್ನ ತೀರ್ಪು ನೀಡಿದ್ದು, ಇಂದಿರಾಗಾಂಧಿಯವರ ನಿರ್ಧಾರವನ್ನು ಎತ್ತಿ ಹಿಡಿದಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಸಮಾಜದ ಒಗ್ಗೂಡುವಿಕೆ ಹಾಗೂ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ. ಆದರೆ ಕೆಲವು ಪಕ್ಷಗಳು ಸಮಾಜವನ್ನು ವಿಭಜಿಸುತ್ತಿವೆ. ಸಮಾನತೆಯನ್ನು ಪ್ರತಿಪಾದಿಸುವ ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಪ್ರತಿಮೆ ಕನ್ಯಾಕುಮಾರಿಯಿಂದ ಕಾಶೀರದವರೆಗೂ ಕಾಣಿಸುತ್ತದೆ ಎಂದರು. ಇದೇ ವೇಳೆ ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಯ ಬಗ್ಗೆಯೂ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಮಾಜಿ ಸಂಸದ ಉಗ್ರಪ್ಪ ಮುಂತಾದವರು ಇದ್ದರು.

RELATED ARTICLES

Latest News