Thursday, December 5, 2024
Homeರಾಜ್ಯಗ್ಯಾರಂಟಿ ಯೋಜನೆಗಳ ಬಗ್ಗೆ ಆಡಳಿತ ಪಕ್ಷದ ಶಾಸಕರಿಂದಲೇ ಅಸಮಾಧಾನ

ಗ್ಯಾರಂಟಿ ಯೋಜನೆಗಳ ಬಗ್ಗೆ ಆಡಳಿತ ಪಕ್ಷದ ಶಾಸಕರಿಂದಲೇ ಅಸಮಾಧಾನ

DK Shivakumar to issue notice to Congress MLA wanting revocation of guarantees

ಬೆಂಗಳೂರು,ನ.26- ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಮುಜುಗರ ಉಂಟುಮಾಡಲಾರಂಭಿಸಿದ್ದಾರೆ.ಹೊಸಪೇಟೆ ಕ್ಷೇತ್ರದ ಶಾಸಕ ಗವಿಯಪ್ಪ ಗ್ಯಾರಂಟಿ ಯೋಜನೆಗಳಲ್ಲಿ ಅನಗತ್ಯವಾದ ಒಂದೆರೆಡನ್ನು ನಿಲ್ಲಿಸಿ ಮನೆ ನಿರ್ಮಾಣದ ಯೋಜನೆಗಳಿಗೆ ಅನುದಾನ ಒದಗಿಸುವಂತೆ ಮನವಿ ಮಾಡಿದ್ದಾರೆ.

ಸಾರ್ವಜನಿಕ ಕಾರ್ಯ ಕ್ರಮದಲ್ಲಿ ಮಾತನಾಡಿರುವ ಅವರು, ಈ ಬಗ್ಗೆ ತಾವು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದು, ಅವರು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳಲ್ಲಿ ಒಂದೆರೆಡು ಅನಗತ್ಯವಾಗಿದೆ. ದ್ವಿಚಕ್ರ ವಾಹನ, ಕಾರುಗಳನ್ನು ಹೊಂದಿರುವವರು ಗ್ಯಾರಂಟಿ ಯೋಜನೆಯಡಿ ಓಡಾಡುವುದಿಲ್ಲ. ಅಂತವರಿಗೆ ಈ ಯೋಜನೆಯ ಅಗತ್ಯವಿಲ್ಲ. ಅದನ್ನು ಪರಿಷ್ಕರಣೆ ಮಾಡಿದರೆ ಮನೆನಿರ್ಮಾಣ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಹಣ ಹೊಂದಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಅಭಿವೃದ್ಧಿ ಯೋಜನೆಗಳಿಗೆ 40 ಸಾವಿರ ಕೋಟಿ ರೂ.ಗಳನ್ನು ಹೊಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಆದರೆ ಗ್ಯಾರಂಟಿ ಯೋಜನೆಯ ಪರಿಷ್ಕರಣೆಯಿಂದ ಇನ್ನಷ್ಟು ಸಹಾಯವಾಗಲಿದೆ ಎಂದು ಹೇಳಿದರು.

ಇತ್ತೀಚೆಗೆ ಗವಿಯಪ್ಪ ಅವರು ರಾಜ್ಯಸರ್ಕಾರದಿಂದ ಅಭಿವೃದ್ಧಿ ಯೋಜನೆಯಲ್ಲಿ ಅನುದಾನ ಸಿಗುತ್ತಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಬಹುನಿರೀಕ್ಷಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಪಕ್ಷದ ಪ್ರಮುಖರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇತ್ತೀಚೆಗೆ ಗವಿಯಪ್ಪ ಅವರ ವಿರುದ್ಧ ಸ್ಥಳೀಯ ಮಟ್ಟದಲ್ಲೇ ಮುಖಂಡರು ಅಸಮಾಧಾನ ಹೊರಹಾಕಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವರಿಷ್ಠರಿಗೆ ಮನವಿ ಮಾಡಿದ್ದರು. ಅದರ ಹೊರತಾಗಿಯೂ ಗವಿಯಪ್ಪ ಮತ್ತೆ ಗ್ಯಾರಂಟಿ ಯೋಜನೆಗಳ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡಲಾರಂಭಿಸಿದ್ದಾರೆ.ಬೆಳಗಾವಿಯ ಚಳಿಗಾಲ ಅಧಿವೇಶನ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರ ಈ ಹೇಳಿಕೆ ವಿರೋಧಪಕ್ಷಗಳಿಗೆ ಅಸ್ತ್ರ ಕೊಟ್ಟಂತಾಗಿದೆ.

RELATED ARTICLES

Latest News