ಬೆಂಗಳೂರು, ನ.5- ಬೇರೆ ರಾಜ್ಯಗಳಲ್ಲಿ ಹಾಲಿನ ದರ ನಮಗಿಂತಲೂ ಹೆಚ್ಚಿದೆ. ಹೀಗಾಗಿ ನಮಲ್ಲೂ ದರ ಪರಿಷ್ಕರಣೆಯಾಗಬೇಕೆಂದು ಕರ್ನಾಟಕ ಹಾಲು ಒಕ್ಕೂಟ ಮಹಾ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ಆದರೆ ಮಂಡಳಿಗೆ ಮನವಿ ಮಾಡಿದ್ದೇವೆ. ಅರ್ಧ ಲೀಟರ್ ಹಾಲು ಮಾರಿದರೆ ನಷ್ಟವಾಗುತ್ತಿದ್ದು, ಒಂದು ಲೀಟರ್ ಹಾಲು ಮಾರಿದರೆ ಲಾಭವಾಗುತ್ತದೆ. ತುಪ್ಪದ ದರ ಇಂದಿನಿಂದ ಏರಿಕೆಯಾಗುತ್ತಿದೆ ಎಂದು ತಿಳಿಸಿದರು.
ಖಾಸಗಿ ಕಂಪಗಳ ಹಾಲು ಆನ್‌ಲೈನ್ ಮಾರುಕಟ್ಟೆ ಹೆಚ್ಚಾಗಿದೆ. ನಾವು ರೈತರಿಗೆ ಹಾಲು ಖರೀದಿಸಿದ ಹಣವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಸಾಕಷ್ಟು ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು.ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ತಾವು ಇಲ್ಲ. ಅಧ್ಯಕ್ಷ ಗದ್ದುಗೆಯ ಬಗ್ಗೆ ತಮಗೆ ಯಾವುದೇ ರೀತಿಯ ಆತುರ ಇಲ್ಲ. ಇನ್ನೂ ಸಮಯವಿದೆ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.
ನವೆಂಬರ್ ಕ್ರಾಂತಿಯ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಗಳಾಗಿಲ್ಲ. ಸಿದ್ದರಾಮಯ್ಯ ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತಾರೋ ಅಲ್ಲಿಯವರೆಗೂ ಇರಲಿ. ಅವರಿಗೆ ಇನ್ನೂ ವಯಸ್ಸು ಆಗಿಲ್ಲ. ನಾಯಕತ್ವ ಗಟ್ಟಿಯಾಗಿದೆ. ಎಲ್ಲಾ ನಾಯಕರು ಸೇರಿದರೆ ಮಾತ್ರ ಪಕ್ಷ ಸದೃಢವಾಗಿರಲು ಸಾಧ್ಯ. ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್ ಸೇರಿದಂತೆ ಎಲ್ಲಾ ನಾಯಕರೂ ಸೇರಿ ಪಕ್ಷ ಕಟ್ಟಿದ್ದಾರೆ ಎಂದರು.
ಗ್ರೇಟರ್ ಬೆಂಗಳೂರು ಪಾಲಿಕೆಗಳ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್ ಗಡುವು ನೀಡಿದ್ದು, ವಾರ್ಡ್ ಮೀಸಲಾತಿ ಕೂಡ ಅಂತಿಮಗೊಳಿಸಬೇಕಿದೆ. ಆಕ್ಷೇಪಗಳನ್ನು ಪರಿಶೀಲಿಸಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತದೆ. ಚುನಾವಣೆ ಎಂದರೆ ಎಲ್ಲರಿಗೂ ಟಾಸ್ಕ್. ಪ್ರತಿಯೊಬ್ಬ ನಾಯಕರು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ಮತಗಳ್ಳತನದ ಬಗ್ಗೆ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಜನರಲ್ಲೂ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕಬ್ಬು ಬೆಳೆಗಾರರಿಗೆ ಬಿಜೆಪಿ ಸರ್ಕಾರ ಹೆಚ್ಚಿನ ಬೆಲೆ ನೀಡಿರಲಿಲ್ಲ. ಆದರೆ ನಮ ಸರ್ಕಾರ ಉತ್ತಮ ದರ ನಿಗದಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿ ವಿವಾದ ಕುರಿತು ನ್ಯಾಯಾಲಯದಲ್ಲಿನ ಪ್ರಕರಣಗಳ ಬಗ್ಗೆ ವಕೀಲರೊಂದಿಗೆ ಚರ್ಚಿಸಲು ದೇಹಲಿಗೆ ಭೇಟಿ ನೀಡುತ್ತಿದ್ದಾರೆ. ಅವಕಾಶ ಸಿಕ್ಕರೆ ವರಿಷ್ಠರನ್ನೂ ಭೇಟಿ ಯಾಗುತ್ತಾರೆ. ಇದರಲ್ಲಿ ವಿಶೇಷ ಏನೂ ಇಲ್ಲ ಎಂದರು.
ಸಂಸದ ತೇಜಸ್ವಿಸೂರ್ಯ ಕಳೆದ 10 ವರ್ಷಗಳಲ್ಲಿ ಬೆಂಗಳೂರಿಗೆ ಒಂದು ಯೋಜನೆಯನ್ನಾದರೂ ತಂದಿದ್ದಾರೆಯೇ? ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯ ಸರ್ಕಾರವೇ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ. ಶೇ. 10ರಷ್ಟು ಪಾಲು ನೀಡಿ ಯೋಜನೆ ತಮದು ಎಂದು ಬಿಂಬಿಸಿಕೊಳ್ಳುತ್ತಾರೆ. ಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ ನಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆಕ್ಷೇಪಿಸಿದರು.
ಒಲಿಪಿಂಕ್ ಕ್ರೀಡಾಕೂಟವನ್ನು ಗುಜರಾತ್‌ನಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿನಲ್ಲಿ ಕ್ರೀಡಾಕೂಟ ನಡೆಸಲು ಏಕೆ ಬೆಂಬಲ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ಸುರಂಗ ರಸ್ತೆಯ ಬಗ್ಗೆ ಮಾತನಾಡುವ ತೇಜಸ್ವಿಸೂರ್ಯ ಮೆಟ್ರೋ ಯೋಜನೆಯಲ್ಲಿ ಕೇಂದ್ರದ ಪಾಲು ಎಷ್ಟು ಹೇಳಲಿ ಎಂದು ಸವಾಲು ಹಾಕಿದರು.
