Wednesday, May 28, 2025
Homeರಾಜಕೀಯ | Politicsಎಚ್‌ಡಿಕೆಗೆ ತಿರುಗೇಟು ಕೊಟ್ಟ ಡಿ.ಕೆ.ಸುರೇಶ್‌

ಎಚ್‌ಡಿಕೆಗೆ ತಿರುಗೇಟು ಕೊಟ್ಟ ಡಿ.ಕೆ.ಸುರೇಶ್‌

D.K. Suresh hits back at HDK

ಬೆಂಗಳೂರು, ಮೇ 26– ರಾಜ್ಯದಿಂದ ವಸೂಲಿಯಾದ ತೆರಿಗೆಯಲ್ಲಿ ಉತ್ತರ ಭಾರತಕ್ಕೆ 5 ಲಕ್ಷ ಕೋಟಿ ರೂ. ಅನುದಾನ ಹರಿದುಹೋಗಿದೆ. ಅದರಲ್ಲಿ ಕರ್ನಾಟಕಕ್ಕೆ ನ್ಯಾಯೋಚಿತ ಪಾಲು ಕೊಡಿಸಿದರೆ ಚಿನ್ನದ ತಗಡು ಒಡೆಸಲು ಸಾಧ್ಯವಾಗುತ್ತದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಹೆಸರು ಬದಲಾದ ತಕ್ಷಣ ಚಿನ್ನದ ತಗಡು ಸಿಗುತ್ತದೆಯೇ? ಎಂದಿದ್ದಾರೆ. ಬೆಂಗಳೂರು ಜಿಲ್ಲೆ ಎಂದರೆ ಯುವಕರಿಗೆ ಉದ್ಯೋಗ ಸಿಗುತ್ತದೆ. ಹೆಸರು ಬದಲಾವಣೆಯಿಂದ ರೈತರು, ಯುವಕರು, ಜನಸಾಮಾನ್ಯರು ಖುಷಿಯಾಗಿದ್ದಾರೆ. ವಿರೋಧಪಕ್ಷಗಳು ಜಿಲ್ಲೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಇದು ಸರಿಯಲ್ಲ ಎಂದರು.

ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಇತಿಹಾಸ ಗೊತ್ತಿಲ್ಲ. ರಾಮನಗರಕ್ಕೆ ಈ ಮೊದಲು ವಿಲಾಸ್‌‍ಪೇಟೆ ಎಂದು ಹೆಸರಿತ್ತು. ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲು ವಿಳಂಬವಾಗುತ್ತಿದೆ. ಅವರಿಗೆ ಅದರ ಬಗ್ಗೆ ಮಾತನಾಡಲಾಗುತ್ತಿಲ್ಲ. ಕೃಷ್ಣ ಮೇಲ್ದಂಡೆ, ಕಳಸಾ ಬಂಡೂರಿ ಯೋಜನೆ ಬಾಕಿ ಇದೆ. ಆ ಬಗ್ಗೆ ಮಾತನಾಡಲಿ, ರಾಮನಗರದ ಬಗ್ಗೆ ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಕಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದವರು, ಈಗ ಕೇಂದ್ರ ಸಚಿವರಾಗಿದ್ದಾರೆ. ಉನ್ನತ ಹುದ್ದೆಯಲ್ಲಿದ್ದವರು ಅದಕ್ಕೆ ತಕ್ಕುದಾದ ಮಾತುಗಳನ್ನಾಡಬೇಕು. ಕನ್ನಡಿಗರ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ಉತ್ತರ ಭಾರತದ ರಾಜ್ಯಗಳಿಗೆ 5 ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದೆ. ಕರ್ನಾಟಕಕ್ಕೆ ಕೊಟ್ಟಿರುವ ದುಡ್ಡೆಷ್ಟು? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿಯವರು ಕೆಂಗಲ್‌ ಹನುಮಂತಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಕೆಂಗಲ್‌ ಅವರ ಸೇವೆ ಸದಾ ಸರಣೀಯ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಮನಗರದಲ್ಲಿ ಕೆಂಗಲ್‌ ಅವರ ಪ್ರತಿಮೆಯನ್ನೂ ನೋಡಲಿಲ್ಲ. ಈಗ ಮಾತನಾಡುತ್ತಾರೆ. ರಾಜ್ಯಕ್ಕೆ ಕೇಂದ್ರದಿಂದ ಕಳೆದ ವರ್ಷ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿದೆ. ನರೇಗಾ ಕೂಲಿ ಕಳೆದ 4 ತಿಂಗಳಿನಿಂದ ಬಂದಿಲ್ಲ. ಇದರ ಬಗ್ಗೆ ಕುಮಾರಸ್ವಾಮಿಯವರು ಗಮನ ಹರಿಸಬೇಕು ಎಂದರು.

ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ, ಜಮೀರ್‌ ಅಹಮದ್‌ ಹೇಳಿರುವ ವಿಚಾರಕ್ಕೆ ಇಲ್ಲ ಎಂದು ಯಾರೂ ಹೇಳಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಇಂತಹ ಅನವಶ್ಯಕ ಚರ್ಚೆಗಳು ಬೇಡ ಎಂದಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಕೋವಿಡ್‌ ಹೆಚ್ಚಾಗಿದೆ. ಆಂಧ್ರಪ್ರದೇಶದಲ್ಲಿ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ. ಚೀನಾ, ಸಿಂಗಾಪೂರದಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಯಾವ ನಿರ್ದೇಶನ ಬರುತ್ತದೆ ಎಂಬುದನ್ನು ಕಾದು ನೋಡುತ್ತೇವೆ ಎಂದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಚ್‌ಎಎಲ್‌ ಅನ್ನು ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು ಎಂದಿರುವುದು ಸರಿಯಲ್ಲ. ಎಚ್‌ಎಎಲ್‌ ಆಟದ ವಸ್ತುವಲ್ಲ. ಬಿಇಎಲ್‌, ಎಚ್‌ಎಎಲ್‌ ಕರ್ನಾಟಕದ ಹೆಮೆ. ಅದನ್ನು ಸ್ಥಳಾಂತರ ಮಾಡಲು ಸಾಧ್ಯವಿಲ್ಲ. 50 ವರ್ಷಗಳಿಂದ ಇಲ್ಲಿ ನೆಲೆನಿಂತು ಬೆಳೆದಿವೆ. ಅದಕ್ಕೆ ಪೂರಕವಾದ ವಾತಾವರಣವೂ ಇಲ್ಲಿದೆ. ಒಬ್ಬ ಮುಖ್ಯಮಂತ್ರಿ ಹೇಳಿದಾಕ್ಷಣ ಅದರ ಸ್ಥಳ ಬದಲಾವಣೆ ಸಾಧ್ಯವಿಲ್ಲ ಎಂದರು.

ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಗೈರುಹಾಜರಾಗಿರುವ ಬಗ್ಗೆ ಬೇರೆ ರೀತಿಯ ಅರ್ಥ ಕಲ್ಪಿಸಬೇಕಿಲ್ಲ. ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ಭಾಗವಹಿಸಿ ಸಮರ್ಥನೀಯ ವಾದ ಮಂಡಿಸಿದ್ದಾರೆ.ಮುಖ್ಯಮಂತ್ರಿ ಹೋಗಿ ಪ್ರಧಾನಿ ಜೊತೆ ಫೋಟೊ ತೆಗೆಸಿಕೊಳ್ಳುವ ಅಗತ್ಯವಿಲ್ಲ. ಕುಮಾರಸ್ವಾಮಿ ದಿನಕ್ಕೊಂದು ಸುಳ್ಳು ಹೇಳುವುದನ್ನು ಬಿಟ್ಟು ರಾಜಕೀಯಪರವಾಗಿ ಕೆಲಸ ಮಾಡಲಿ ಎಂದರು.

ಬಿಜೆಪಿ ಶಾಸಕ ಮುನಿರತ್ನರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯಗಳಾಗುತ್ತಿವೆ. ಇದನ್ನು ತಡೆಯಲು ಆರ್‌.ಅಶೋಕ್‌ ಮತ್ತು ವಿಜಯೇಂದ್ರ ಅಸಮರ್ಥರಾಗಿದ್ದಾರೆ. ಹೆಣ್ಣುಮಗಳೊಬ್ಬಳು ದೂರು ನೀಡಿ ಅತ್ಯಾಚಾರ ಮಾಡಿ ತನ್ನ ಮೇಲೆ ಮೂತ್ರ ಮಾಡಿದ್ದರು ಎಂದು ದೂರು ನೀಡಿದ್ದಾರೆ. ಅದರ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಮುನಿರತ್ನ ನಾಪತ್ತೆಯಾಗಿದ್ದಾರೆ. ಬಿಜೆಪಿಯವರು ಹುಡುಕಿಕೊಡಲಿ. ಬೆಂಗಳೂರು ಡೇರಿ ನಿರ್ದೇಶಕ ಸ್ಥಾನಕ್ಕೆ 14 ಜನ ಆಯ್ಕೆಯಾಗಿದ್ದಾರೆ. ಬಮುಲ್‌ ಅಧ್ಯಕ್ಷರನ್ನು ನಿರ್ದೇಶಕರು ಆಯ್ಕೆ ಮಾಡುತ್ತಾರೆ. ಕೆಎಂಎಫ್‌ ಅಧ್ಯಕ್ಷರನ್ನು ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದು ಹೇಳಿದರು.

RELATED ARTICLES

Latest News