Monday, September 15, 2025
Homeರಾಜ್ಯಡಿ.ಕೆ. ಸುರೇಶ ಕೆಎಂಎಫ್‌ ಅಧ್ಯಕ್ಷಗಾದಿ ಕನಸಿಗೆ ನಾನಾ ವಿಘ್ನ

ಡಿ.ಕೆ. ಸುರೇಶ ಕೆಎಂಎಫ್‌ ಅಧ್ಯಕ್ಷಗಾದಿ ಕನಸಿಗೆ ನಾನಾ ವಿಘ್ನ

D.K. Suresh KMF President's dream faces many obstacles

ಬೆಂಗಳೂರು,ಜು.30- ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಉಮೇದಿನಲ್ಲಿರುವ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರಿಗೆ ನಾನಾ ರೀತಿಯ ವಿಘ್ನಗಳು ಎದುರಾಗಲಾರಂಭಿಸಿವೆ. ಹಾಲಿ ಶಾಸಕ ಭೀಮಾನಾಯಕ್‌, ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಪ್ರಬಲ ಪೈಪೋಟಿ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತಬಣಗಳಲ್ಲಿ ಗುರುತಿಸಿಕೊಂಡಿರುವ ಮತ್ತೊಬ್ಬ ಶಾಸಕರು ಕೆಎಂಎಫ್‌ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಸದ್ದಿಲ್ಲದೆ ಲಾಬಿ ನಡೆಸಲಾರಂಭಿಸಿರುವುದು ಡಿ.ಕೆ.ಶಿವಕುಮಾರ್‌ ಬಣಕ್ಕೆ ತಲೆಬಿಸಿ ತಂದಿಟ್ಟಿದೆ.

ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್‌ ಈಗಾಗಲೇ ಕೊಪ್ಪಳ ಜಿಲ್ಲೆಯಿಂದ ಕೆಎಂಎಫ್‌ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ತಾವೂ ಆಕಾಂಕ್ಷಿಯಾಗಿದ್ದು, ಬೆಂಬಲ ನೀಡುವಂತೆ ಹಲವು ಸಚಿವರನ್ನು ಭೇಟಿ ಮಾಡಲಾರಂಭಿಸಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಬಣದ ಸಚಿವರಾಗಿರುವ ಎಚ್‌.ಸಿ.ಮಹದೇವಪ್ಪ ಹಾಗೂ ಸತೀಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿರುವ ರಾಘವೇಂದ್ರ ಹಿಟ್ನಾಳ್‌ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸಲಿದ್ದು, ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಎಚ್‌.ಸಿ.ಮಹದೇವಪ್ಪ ಚಾಮರಾಜನಗರ, ಮೈಸೂರು ಜಿಲ್ಲೆಯ ನಿರ್ದೇಶಕರ ವಿಶ್ವಾಸದಲ್ಲಿದ್ದಾರೆ. ಸತೀಶ್‌ ಜಾರಕಿಹೊಳಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳ ಕೆಎಂಎಫ್‌ ನಿರ್ದೇಶಕರ ಜೊತೆ ವಿಶ್ವಾಸದಲ್ಲಿರುವುದರಿಂದ ರಾಘವೇಂದ್ರ ಹಿಟ್ನಾಳ್‌ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.

ಕೆಎಂಎಫ್‌ ಸಹಕಾರಿ ಸಂಸ್ಥೆಯಾಗಿದ್ದು, ಪ್ರಜಾಪ್ರಭುತ್ವದ ಧ್ಯೇಯೋದ್ದೇಶದ ಅನುಸಾರ ಚುನಾವಣೆ ಮೂಲಕ ಅಧ್ಯಕ್ಷರ ಆಯ್ಕೆಯಾಗುತ್ತದೆ. ಈ ಮಾದರಿಯ ಮೂಲಕವೇ ಅಧ್ಯಕ್ಷರ ಆಯ್ಕೆ ನಡೆಯುವುದಾದರೆ ಡಿ.ಕೆ.ಸುರೇಶ್‌ ಅವರ ಗೆಲುವು ಕಷ್ಟಸಾಧ್ಯ.ಹೈಕಮಾಂಡ್‌ ಸೂಚನೆ ಮೇರೆಗೆ ಸರ್ವಾನುಮತದ ಅಭ್ಯರ್ಥಿ ಆಯ್ಕೆಯಾಗುವ ಸಂದರ್ಭ ಬಂದರೆ ಡಿ.ಕೆ.ಶಿವಕುಮಾರ್‌ ಬಣ ಮೇಲುಗೈ ಸಾಧಿಸಲಿದೆ.

ತಮ ಸಹೋದರ ಡಿ.ಕೆ.ಸುರೇಶ್‌ ಅವರನ್ನು ಕೆಎಂಎಫ್‌ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್‌ ಎಲ್ಲಾ ರೀತಿಯ ಅಪಮಾನ, ಹಿನ್ನಡೆಗಳನ್ನು ಅವಡುಗಚ್ಚಿ ಸಹಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.ಒಂದು ವೇಳೆ ತಮ ಸಹೋದರನಿಗೆ ಪ್ರತಿಸ್ಪರ್ಧಿಯಾಗಿ ಮುಖ್ಯಮಂತ್ರಿ ಬಣದ ನಾಯಕರು ಬಂದರೆ ಆ ವೇಳೆ ಡಿ.ಕೆ.ಶಿವಕುಮಾರ್‌ ಸಹನೆಕಟ್ಟೆ ಒಡೆಯಲಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಪ್ರಮಾಣದ ಬೆಳವಣಿಗೆಗಳಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

ಈಗಾಗಲೇ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ ಡಿ.ಕೆ.ಸುರೇಶ್‌ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಎಂಎಫ್‌ ಅಧ್ಯಕ್ಷರಾಗುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಪ್ರಮುಖ ಜವಾಬ್ದಾರಿಯನ್ನು ನಿಭಾಯಿಸುವ ಉಮೇದಿನಲ್ಲಿದ್ದಾರೆ.ದಿನ ಕಳೆದಂತೆ ಒಬ್ಬೊಬ್ಬರಾಗಿ ಪ್ರತಿಸ್ಪರ್ಧಿಗಳು ಹುಟ್ಟಿಕೊಳ್ಳುತ್ತಿರುವುದು ಡಿ.ಕೆ.ಶಿವಕುಮಾರ್‌ ಬಣಕ್ಕೆ ನುಂಗಲಾರದ ಬಿಸಿತುಪ್ಪವಾಗಿದೆ.

RELATED ARTICLES

Latest News