ಮಂಗಳೂರು, ಮೇ.2– ಕರಾವಳಿ ಕರ್ನಾಟಕ ಮತ್ತೆ ಉದ್ವಿಗ್ನಗೊಂಡಿದ್ದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕಗ್ಗೋಲೆ ಖಂಡಿಸಿ ಇಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ಹಿಂದೂ ಸಂಘಟನೆಗಳು ಕರೆ ನೀಡಿವೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇಂದು ಬಂದ್‌ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಹೋಟೆಲ್, ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಬಹುತೇಕ ಜನಜೀವನ ಸ್ತಬ್ದಗೊಂಡಿದೆ.
ಮಂಗಳೂರಿನಿಂದ ಬಂಟ್ವಾಳದ ಕಾರಿಂಜದ ಪುಳಿಮಜಲುವರೆಗೆ ಸುಹಾಸ್ ಶೆಟ್ಟಿಯ ಮೃತ ದೇಹವನ್ನು ಹೊತ್ತು ಮೆರವಣಿಗೆ ನಡೆಸಲಾಗಿದೆ. ನಿಷೇಧಾಜ್ಞೆ -ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಮಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳು ಜಿಹಾದಿಗಳಿಂದ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದ್ದು, ಇದನ್ನು ಉಗ್ರವಾಗಿ ಖಂಡಿಸಬೇಕೆಂದು ಕರೆ ನೀಡಿದ್ದು, ಇದರಲ್ಲಿ ನಿಷೇಧಿತ ಪಿಎಫ್‌ಐ ಕೈವಾಡ ಇದೆಯೆಂದು ಆರೋಪಿಸಿದ್ದಾರೆ.
ಇಂದು ಬೆಳಗ್ಗೆ ಕೆಲ ಬಸ್‌ಗಳಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರು ಎಲ್ಲೆಡೆ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮುಲಾಜಿಲ್ಲದೆ ಕ್ರಮ: ಎಡಿಜಿಪಿ ಹಿತೇಂದ್ರ ಅವರು ಮಂಗಳೂರಿಗೆ ಭೇಟಿ ನೀಡಿದ್ದು, ಘಟನೆ ಕುರಿತಂತೆ ಈಗಾಗಲೇ ಆರೋಪಿಗಳ ಸುಳಿವು ಸಿಕ್ಕಿದ್ದು ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಹಾಸ್ ಶೆಟ್ಟಿ ಹತ್ಯೆಯನ್ನು ಅಪಹಾಸ್ಯ ಮಾಡಿ ಫಿನಿಶ್ ಎಂದು ಬರೆಯಲಾಗಿದ್ದು,ಮತ್ತಷ್ಟು ವಿಕೆಟ್‌ಗಳು ಉರುಳಲಿದೆ ಎಂದು ಎಚ್ಚರಿಸಿರುವುದು ಭಾರಿ ವೈರಲ್ ಆಗಿದೆ. ಮಂಗಳೂರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಯೆಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿ ನೀಡಿ ಸುಹಾಸ್ ಶೆಟ್ಟಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.