Thursday, August 7, 2025
Homeರಾಜ್ಯಮೀಸಲಾತಿ ಚರ್ಚೆ ನೆಪದಲ್ಲಿ ಮತ್ತೆ ದಲಿತ ಸಿಎಂ ಕೂಗು

ಮೀಸಲಾತಿ ಚರ್ಚೆ ನೆಪದಲ್ಲಿ ಮತ್ತೆ ದಲಿತ ಸಿಎಂ ಕೂಗು

Dalit CM pretext of reservation discussion

ಬೆಂಗಳೂರು,ಆ.2- ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ದೆಹಲಿ ಪ್ರವಾಸದಲ್ಲಿರುವ ಸಂದರ್ಭದಲ್ಲೇ, ಇತ್ತ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿಯ ಸಚಿವರು ಮತ್ತು ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರ ಮನೆಯಲ್ಲಿ ಸಂಜೆ ಪರಿಶಿಷ್ಟ ಜಾತಿಯ ಶಾಸಕರು ಮತ್ತು ಸಚಿವರ ಮಹತ್ವದ ಸಭೆ ನಡೆಯಲಿದ್ದು, ಒಳಮೀಸಲಾತಿ ಕುರಿತಂತೆ ಚರ್ಚೆಗಳಾಗುವ ಸಾಧ್ಯತೆಗಳಿವೆ.ಸುಪ್ರೀಂಕೋಟ್‌ ತೀರ್ಪಿನ ಬಳಿಕ ಒಳಮೀಸಲಾತಿಯ ಜಾರಿಗೆ ರಾಜ್ಯಸರ್ಕಾರ ಮುಂದಾಗಿದೆ. ಈ ಸಂಬಂಧಪಟ್ಟಂತೆ ಸಮರ್ಪಕ ದತ್ತಾಂಶಗಳನ್ನು ಸಂಗ್ರಹಿಸಲು ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌‍ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ.

ಆಯೋಗ ಮನೆ-ಮನೆ ಸಮೀಕ್ಷೆ ಹಾಗೂ ಆನ್‌ಲೈನ್‌ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಿದ್ದು, ಇನ್ನೇನು ವರದಿ ನೀಡುವ ಸಾಧ್ಯತೆಯಿದೆ. ಸಮೀಕ್ಷೆ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಬೆಂಗಳೂರಿನಲ್ಲಿ ಶೇ. 35ಕ್ಕೂ ಹೆಚ್ಚಿನ ಜನ ಸಂಖ್ಯೆ ದತ್ತಾಂಶ ನೀಡಿಲ್ಲ ಎಂಬೆಲ್ಲಾ ಆಕ್ಷೇಪಗಳಿವೆ.

ಈ ಮೊದಲು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಬಗ್ಗೆಯೂ ಇದೇ ರೀತಿಯ ಟೀಕೆಗಳಿದ್ದವು. ಈಗ ನ್ಯಾ.ನಾಗಮೋಹನ್‌ದಾಸ್‌‍ ವರದಿಗೆ ಸಂಬಂಧಪಟ್ಟಂತೆಯೂ ಅಪೂರ್ಣ ಮಾಹಿತಿ ಸಂಗ್ರಹವಾಗಿದೆ ಎಂಬ ತಕರಾರುಗಳಿವೆ. ಈ ಹಿನ್ನೆಲೆಯಲ್ಲಿ ಶಾಸಕರುಗಳಿಗೆ ಪೂರ್ಣಪ್ರಮಾಣದ ಮಾಹಿತಿ ನೀಡಲು ಹಾಗೂ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಲು ಸಭೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ಒಳಮೀಸಲಾತಿ ಜಾರಿ ಕಾಂಗ್ರೆಸ್‌‍ ಸರ್ಕಾರದ ಬದ್ಧತೆಯಾಗಿದೆ. ಆದರೆ ಈ ವಿಚಾರವಾಗಿ ಆಡಳಿತ ಪಕ್ಷದ ಶಾಸಕರಲ್ಲೇ ಒಮತದ ಕೊರತೆಯಿದೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಸಚಿವರು ಶಾಸಕರಾದಿಯಾಗಿ ಯಾರೂ ಕೂಡ ಬಹಿರಂಗ ಟೀಕೆ ಮಾಡಬಾರದು. ಅನಗತ್ಯ ಹೇಳಿಕೆಗಳನ್ನು ನೀಡಬಾರದು ಎಂಬ ಹಿನ್ನೆಲೆಯಲ್ಲಿ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಲು ಸಿದ್ದರಾಮಯ್ಯ ಪರಮೇಶ್ವರ್‌ ಅವರಿಗೆ ಜವಬ್ದಾರಿ ನೀಡಿದ್ದಾರೆ ಎಂಬ ಮಾತಿದೆ.

ಸಭೆಯಲ್ಲಿ ನಿಗಮಮಂಡಳಿಗಳ ನೇಮಕಾತಿ ವಿಳಂಬ, ವಿಧಾನ ಪರಿಷತ್‌ ಸದಸ್ಯರ ಆಯ್ಕೆ ಹಾಗೂ ವಿವಿಧ ರಾಜಕೀಯ ಸ್ಥಾನಮಾನಗಳ ಕುರಿತಂತೆ ಚರ್ಚೆಯಾಗಲಿದೆ.ಪರಿಶಿಷ್ಟ ಜಾತಿಯ ಶಾಸಕರು ಹಾಗೂ ಸಚಿವರ ಸಭೆ ಪೂರ್ವ ನಿರ್ಧರಿತವಾಗಿದ್ದು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಬೆಂಗಳೂರಿನಲ್ಲಿ ಇಲ್ಲದೇ ಇರುವುದಕ್ಕೂ, ಈ ಸಂದರ್ಭದಲ್ಲೇ ಸಭೆ ನಡೆಸುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಅನಗತ್ಯವಾಗಿ ವದಂತಿಗಳನ್ನು ಹರಡಬಾರದು ಎಂದು ಕಾಂಗ್ರೆಸ್‌‍ ನಾಯಕರು ಮನವಿ ಮಾಡಿದ್ದಾರೆ.

ರಾಜಕೀಯ ಸ್ಥಾನಮಾನಗಳಲ್ಲಿ ಆಗಿರುವಂತಹ ತೊಂದರೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಆದರೆ ಅದು ಬಂಡಾಯವಾಗಲಿ, ಅಸಮಾಧಾನವಾಗಲಿ ಅಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಮುಂದಿನ ಮುಖ್ಯಮಂತ್ರಿ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಪರಮೇಶ್ವರ್‌ ಅವರು, ಮೀಸಲಾತಿಯ ನೆಪದಲ್ಲಿ ನಾಯಕತ್ವದ ಜಪದೊಂದಿಗೆ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ ಎಂಬ ವ್ಯಾಖ್ಯಾನಗಳು ನಡೆಯುತ್ತಿವೆ.

RELATED ARTICLES

Latest News