ಬೆಂಗಳೂರು,ಜೂ.22- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದ್ದು, ವಿಜಯನಗರ ಉಪವಿಭಾಗದ ಪೊಲೀಸರು ಸಂಜೆ ವೇಳೆಗೆ ಈ ನಾಲ್ವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಆರೋಪಿಗಳಾದ ನಟ ದರ್ಶನ್ ಹಾಗೂ ಆತನ ಗ್ಯಾಂಗ್‌ನ ವಿನಯ್, ಧನರಾಜ್ ಮತ್ತು ಪ್ರದೋಷ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಮತ್ತೆ ತಮ ವಶಕ್ಕೆ ಪಡೆದು ಇನ್ನಷ್ಟು ಹೇಳಿಕೆಗಳನ್ನು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಇಂದು ಮತ್ತೆ ನ್ಯಾಯಾಲಯದ ಮುಂದೆ ಈ ನಾಲ್ವರನ್ನು ಹಾಜರುಪಡಿಸಲಾಗುತ್ತದೆ. ಒಟ್ಟು 12 ದಿನಗಳ ಕಾಲ ವಿಚಾರಣೆ ನಡೆಸಿರುವ ಪೊಲೀಸರು ಬಹುತೇಕ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟಾರೆ ಈ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಆರೋಪಿಗಳಿಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗುವಂತೆ ಕಾಣುತ್ತಿದೆ.
ಈಗಾಗಲೇ ಈ ಪ್ರಕರಣದಲ್ಲಿ ಪವಿತ್ರಾಗೌಡ ಸೇರಿದಂತೆ 9 ಮಂದಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಇದೀಗ ನಟ ದರ್ಶನ್ ಹಾಗೂ ಉಳಿದ ಆರೋಪಿಗಳು ಇಂದು ಪರಪ್ಪನ ಅಗ್ರಹಾರ ಸೇರುವುದು ಖಚಿತ ಎನ್ನಲಾಗುತ್ತಿದೆ.
ಸ್ಥಳಮಹಜರು ವೇಳೆ ದರ್ಶನ್ ಮನೆಯಲ್ಲಿ ಪತ್ತೆಯಾದ 37 ಲಕ್ಷ ಹಣದ ಮೂಲದ ಬಗ್ಗೆ ಮಾಹಿತಿ ಪಡೆಯಲು ದರ್ಶನ್‌ನನ್ನು ಮಾತ್ರ ಮತ್ತೇನಾದರೂ ಪೊಲೀಸರು ತಮ ಕಸ್ಟಡಿಗೆ ಪಡೆಯಬಹುದೆಂಬುದನ್ನು ಅಲ್ಲಗಳೆಯುವಂತಿಲ್ಲ.
ಬಿಗಿ ಭದ್ರತೆ :
ಇಂದು ನ್ಯಾಯಾಲಯಕ್ಕೆ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಕರೆದೊಯ್ಯಲಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ.ಅಭಿಮಾನಿಗಳು ನ್ಯಾಯಾಲಯದ ಬಳಿ ಹೆಚ್ಚಾಗಿ ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಪಿ ಪೊಲೀಸ್ ಸಹಿತ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಜಯನಗರ ಉಪವಿಭಾಗದ ಪೊಲೀಸರು 130ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಮುಂದಿನ ದಿನಗಳಲ್ಲಿ ಈ ಆರೋಪಿಗಳಿಗೆ ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.