ಬೆಂಗಳೂರು,ಸೆ.10- ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ದರ್ಶನ್ ಗ್ಯಾಂಗ್ ಇನ್ನಿಲ್ಲದ ಪ್ರಯತ್ನ ಮಾಡಿರುವುದು ಆರೋಪಿಗಳ ಹೇಳಿಕೆಗಳಿಂದ ತಿಳಿದುಬಂದಿದೆ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸುಮನಹಳ್ಳಿ ರಾಜಕಾಲುವೆಯಲ್ಲಿ ರೇಣುಕಾಸ್ವಾಮಿ ಶವ ಪತ್ತೆಯಾದ ನಂತರ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿದರು.
ಈ ವಿಷಯ ಪವಿತ್ರಾ ಗೌಡಗೆ ದರ್ಶನ್ ಗ್ಯಾಂಗ್‌ನಿಂದ ಗೊತ್ತಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತನ್ನ ಗೆಳತಿಯ ಪತಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವುದು ತಿಳಿದು ಗೆಳತಿಯನ್ನು ಕಾಫಿಗಾಗಿ ಹೋಟೆಲ್‌ಗೆ ಕರೆಸಿಕೊಂಡಿದ್ದಾಳೆ. ನಂತರ ಆಕೆಯ ಮನೆಗೆ ಹೋಗಿ ಗೆಳತಿಯ ಪತಿಯಿಂದ ರೇಣುಕಾಸ್ವಾಮಿ ಮೃತದೇಹದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾಳೆ.
ನಮ ಸಂಬಂಧಿಯೊಬ್ಬರು ನಾಪತ್ತೆಯಾಗಿದ್ದಾರೆ. ಅವರ ಮೃತದೇಹ ಸುಮನಹಳ್ಳಿ ರಾಜಕಾಲುವೆಯಲ್ಲಿ ಪತ್ತೆಯಾಗಿದೆ. ಆ ಬಗ್ಗೆ ನಿಮ ಪತಿಯಿಂದ ವಿಷಯ ತಿಳಿದುಕೊ ಎಂದು ಗೆಳತಿಗೆ ಪವಿತ್ರ ಹೇಳಿದ್ದಾಳೆ.ಆ ಬಳಿಕ ಗೆಳತಿ ತನ್ನ ಪತಿಯೊಂದಿಗೆ ಈ ಕುರಿತು ಮಾತನಾಡಿದ್ದು, ಈಕೆಯ ಕೋರಿಕೆಯಂತೆ ಅವರು ರೇಣುಕಾಸ್ವಾಮಿಯ ಫೋಟೋಗಳನ್ನು ಕಳುಹಿಸಿದಾಗ, ಆ ಫೋಟೋಗಳನ್ನು ಪವಿತ್ರಾಗೆ ತೋರಿಸಿದ್ದಾರೆ.
ತದನಂತರ ಈ ವಿಷಯವನ್ನು ಪವಿತ್ರಾ ಅಂದು ರಾತ್ರಿ ದರ್ಶನ್‌ಗೆ ಕರೆ ಮಾಡಿ ಇದರ ಬಗ್ಗೆ ತಿಳಿಸಿದ್ದಾಳೆ. ಮತ್ತೆ ದರ್ಶನ್ ಕರೆ ಮಾಡುತ್ತಿದ್ದಂತೆ ಪವಿತ್ರಾ ಗಾಬರಿಯಾಗಿ ಮನೆಗೆ ಹೋಗಿದ್ದಾಳೆ.ಕೆಲ ಸಮಯದ ಬಳಿಕ ಪವಿತ್ರಾಳ ಗೆಳತಿಗೆ ಸ್ಟೋಟಿಬ್ರೋಕ್ ಮಾಲೀಕ ವಿನಯ್ ಕರೆ ಮಾಡಿ, ಸುಮನಹಳ್ಳಿ ರಾಜಕಾಲುವೆಯಲ್ಲಿ ಪತ್ತೆಯಾದ ಶವದ ಮರಣೋತ್ತರ ಪರೀಕ್ಷೆ ವೇಳೆ ನಿಮ ಪತಿಗೆ ಹೇಳಿ ನಮಗೆ ಸಹಾಯ ಮಾಡುವಂತೆ ಕೇಳಿದಾಗ, ಅದು ಸಾಧ್ಯವಿಲ್ಲ ಎಂದು ಪವಿತ್ರಾ ಗೆಳತಿ ಗಾಬರಿಯಾಗಿ ತಕ್ಷಣ ಫೋನ್ ಸ್ಥಗಿತಗೊಳಿಸಿದ್ದಾರೆ.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬಂದು ಹಲ್ಲೆ ಮಾಡಿ ನಂತರ ರಾಜಕಾಲುವೆಗೆ ಬಿಸಾಡಿದ್ದರು. ಹಣಕಾಸು ವಿಚಾರವಾಗಿ ನಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ನಾಲ್ಕು ಮಂದಿಗೆ ಶರಣಾಗುವಂತೆ ಹೇಳಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು. ಆದರೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಈ ಪ್ರಕರಣವನ್ನು ಚಾಣಾಕ್ಷತನದಿಂದ ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.