ಮೈಸೂರು, ಆ.31– ದಸರಾ ನಾಡ ಹಬ್ಬವಾಗಿದ್ದು ಇದನ್ನು ಎಲ್ಲಾ ಧರ್ಮದವರು ಆಚರಣೆ ಮಾಡುತ್ತಾರೆ. ಕಾರ್ಯಕ್ರಮ ಉದ್ಘಾಟನೆ ಮಾಡಲು ನಿರ್ದಿಷ್ಟ ಸಮುದಾಯದವರು ಇರಬೇಕೆಂಬುವುದು ಮತಾಂಧರ ವಾದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಆಚರಣೆಯ ಉನ್ನತ ಅಧಿಕಾರ ಸಮಿತಿ ಉದ್ಘಾಟಕರನ್ನು ಆಯ್ಕೆ ಮಾಡಲು ನನಗೆ ಅವಕಾಶ ನೀಡಿತ್ತು. ಈ ಹಿಂದೆಯೂ ಮುಸ್ಲಿಂ ಸಮುದಾಯ ಕವಿ ನಿಸಾರ್ ಅಹಮದ್ ಅವರಿಂದ ದಸರಾ ಉದ್ಘಾಟನೆ ಮಾಡಿಸಲಾಗಿತ್ತು. ಈ ಬಾರಿ ಬೂಕರ್ ಪ್ರಶಸ್ತಿ ವಿಜೇತರಾದ ಬಾನುಮುಷ್ತಾಕ್‌ರನ್ನು ಆಹ್ವಾನಿಸಲು ತಾವು ನಿರ್ಧಾರ ತೆಗೆದುಕೊಂಡಿದ್ದು ಸರಿಯಾಗಿದೆ ಎಂದಿದ್ದಾರೆ.
ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ದ ಸೇರಿದಂತೆ ಎಲ್ಲಾ ಧರ್ಮದವರು ನಾಡ ಹಬ್ಬ ದಸರಾವನ್ನು ಆಚರಣೆ ಮಾಡುತ್ತಾರೆ. ಈ ಹಿಂದೆ ಮಹಾರಾಜರ ಕಾಲದಲ್ಲಿ ಹೈದರಾಲಿ, ಟಿಪ್ಪು ದಸರಾ ಆಚರಣೆ ಮಾಡುತ್ತಿದ್ದರು. ನಂತರ ಮಿರ್ಜಾ ಇಸಾಯಿಲ್ ದಿವಾನರಾಗಿದ್ದ ಕಾಲದಲ್ಲೂ ದಸರಾ ವಿಜೃಂಭಣೆಯಿಂದ ನಡೆದಿತ್ತು. ಇದು ಧರ್ಮಾತೀತ ಹಾಗೂ ಜಾತ್ಯತೀತವಾದ ಹಬ್ಬ ಎಂದು ಹೇಳಿದರು.
ಬೂಕರ್ ಪ್ರಶಸ್ತಿ ವಿಜೇತರು ನಮಲ್ಲಿ ಬಹಳ ಕಡಿಮೆ. ಬಹುಶಃ ಬಾನುಮುಷ್ತಾಕ್ ಎರಡನೇಯವರು. ಧರ್ಮಾಂಧರಿಗೆ ಇತಿಹಾಸ ಗೊತ್ತಿಲ್ಲ. ಅಂತಹವರು ಮಾತ್ರ ಟೀಕೆ ಮಾಡುತಾರೆ. ಮೊದಲು ಅವರು ಇತಿಹಾಸ ತಿಳಿದುಕೊಳ್ಳಲಿ. ಬಿಜೆಪಿಯವರು ರಾಜಕೀಯವಾಗಿ ಟೀಕೆ ಮಾಡುತ್ತಿದ್ದಾರೆ. ಎಂದಿಗೂ ಜಾತ್ಯತೀತವಾಗಿ ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದರು.
ಬಾನುಮುಷ್ತಾಕ್ ಅವರಿಗೆ ಕನ್ನಡಾಂಬೆಯ ಬಗ್ಗೆ ಗೌರವವಿದೆ. ಹೃದಯ ಹಣತೆ ಕೃತಿಯನ್ನು ಕನ್ನಡ ಭಾಷೆಯಲ್ಲೇ ಬರೆದಿದ್ದಾರೆ. ಭಾಷೆಯ ಬಗ್ಗೆ ಅಭಿಮಾನ, ಪ್ರೀತಿ, ಗೌರವ ಇಲ್ಲದೇ ಇದ್ದರೆ, ಕನ್ನಡದಲ್ಲಿ ಬರೆಯುತ್ತಿದ್ದರೇ? ಅವರ ಎಲ್ಲಾ ಸಾಹಿತ್ಯವೂ ಕನ್ನಡದಲ್ಲೇ ರಚನೆಯಾಗಿವೆ ಎಂದರು.
ಬಿಜೆಪಿಯವರು ಕುಂಟು ನೆಪ ಹುಡುಕುತ್ತಿದ್ದಾರೆ. ಇದು ನಾಡ ಹಬ್ಬ. ಇದನ್ನು ಉದ್ಘಾಟನೆ ಮಾಡಲು ಆ ಧರ್ಮ, ಈ ಧರ್ಮ ಎಂಬುವುದಿಲ್ಲ. ಬಾನುಮುಷ್ತಾಕ್ ದನ ತಿಂದು ಬರುವುದನ್ನು ಬಿಜೆಪಿಯ ನಾಯಕರು ನೋಡಿದ್ದಾರೆಯೇ? ಢೋಂಗಿಗಳು ಮಾತ್ರ ಈ ರೀತಿ ಮಾತನಾಡಲು ಸಾಧ್ಯ. ಅಂತಹವರ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬಾನುಮುಷ್ತಾಕ್ ಅವರ ಪುಸ್ತಕವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ದೀಪಾ ಬಸ್ತಿ ಅವರಿಗೂ ರಾಜ್ಯ ಸರ್ಕಾರ ಗೌರವ ಸಲ್ಲಿಸಿದೆ. ಸನಾನ ಮಾಡಿ, 10 ಲಕ್ಷ ರೂ. ನೀಡಲಾಗಿದೆ. ನುಷುಷ್ತಾಕ್‌ರಂತೆಯೇ ದೀಪಾ ಬಸ್ತಿ ಅವರನ್ನು ಸರ್ಕಾರ ಗೌರವಿಸಿದೆ ಎಂದು ಹೇಳಿದರು.ದಸರಾ ಆಚರಣೆಯ ವೇಳೆ ವಿಜಯ ದಶಮಿಯಂದು ಏರ್‌ಷೋ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸತ್ಯ ಹೊರ ತರುವುದಷ್ಟೇ ಸರ್ಕಾರದ ಉದ್ದೇಶ:
ಧರ್ಮಸ್ಥಳದ ವಿಚಾರದಲ್ಲೂ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅವರ ನಡವಳಿಕೆ ಖಂಡನೀಯ. ಎಸ್‌ಐಟಿ ತನಿಖೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ತನಿಖೆಯಾಗದೇ ಇದ್ದರೆ, ಧರ್ಮಸ್ಥಳದ ಮೇಲಿನ ಅನುಮಾನ, ಸಂದೇಹಗಳು ಜೀವಂತವಾಗಿರುತ್ತವೆ. ಇಂತಹ ತೂಗುಗತ್ತಿ ಸದಾ ನೇತಾಡುತ್ತಲೇ ಇರುತ್ತದೆ.
ಅನುಮಾನಗಳನ್ನು ಹೋಗಲಾಡಿಸುವ ಸಲುವಾಗಿಯೇ ಎಸ್‌ಐಟಿ ರಚಿಸಲಾಗಿದೆ ಎಂದರು. ದೂರುದಾರ ನ್ಯಾಯಾಲಯದ ಮುಂದೆ ಹೋಗಿ 164 ಅಡಿ ಹೇಳಿಕೆ ದಾಖಲಿಸಿದ್ದಾನೆ. ಅನೇಕ ಸಂಘಸಂಸ್ಥೆಗಳು ಎಸ್‌ಐಟಿ ತನಿಖೆಗೆ ಆಗ್ರಹಿಸಿದ್ದವು. ಸತ್ಯ ಹೊರ ಬರಬೇಕು ಎಂಬುದು ಸರ್ಕಾರದ ಉದ್ದೇಶವಾಗಿತ್ತು ಬಿಜೆಪಿಯವರು ಎಸ್‌ಐಟಿ ತನಿಖೆಯನ್ನು ಆರಂಭದಲ್ಲಿ ಸ್ವಾಗತಿಸಿದ್ದರು. ಈಗ ಜಾಥಾ ಮಾಡುತ್ತಿದ್ದಾರೆ.
ಬಿಜೆಪಿಯವರಿಗೆ ಧರ್ಮವೂ ಗೊತ್ತಿಲ್ಲ, ಜಾತಿಯೂ ಗೊತ್ತಿಲ್ಲ. ರಾಜಕೀಯಕ್ಕಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಧರ್ಮಸ್ಥಳದ ವಿರುದ್ಧ ದೂರುಗಳಿವೆೆ. ಜನರಿಗೆ ಸತ್ಯ ಗೊತ್ತಾಗಬೇಕು. ಆರೋಪಗಳಿಗೆ ಉತ್ತರ ಸಿಗಬೇಕು. ಈ ಕಾರಣಕ್ಕಾಗಿ ಎಸ್‌ಐಟಿ ರಚನೆ ಮಾಡಿದ್ದೇವೆ. ತನಿಖೆಗೆ ಸಂಪೂರ್ಣ ಸ್ವತಂತ್ರ್ಯ ನೀಡಿದ್ದೇವೆ. ತನಿಖೆ ಮಾಡಿ ಅಧಿಕಾರಿಗಳು ವರದಿ ನೀಡಲಿದ್ದಾರೆ. ಸರ್ಕಾರ ಯಾವುದೇ ಹಂತದಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ. ಈಗ ಎನ್‌ಐಎ ತನಿಖೆಗೆ ಕೇಳುತ್ತಿದ್ದಾರೆ. ಇದು ಹಾಸ್ಯಾಸ್ಪದ. ನನ್ನ ಅಭಿಪ್ರಾಯದಲ್ಲಿ ಬೇರೆ ಸ್ವರೂಪದ ತನಿಖೆಯ ಅಗತ್ಯ ಇಲ್ಲ ಎಂದರು.