ಮೈಸೂರು,ಸೆ.7- ವಿಶ್ವವಿಖ್ಯಾತ ದಸರಾದ ಆಕರ್ಷಣೆಯಾದ ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಗಾಗಿ ದಸರಾ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್‌ಗಳನ್ನು 25 ದಿನ ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ.
ಪ್ರತಿಬಾರಿ ದಸರಾ ಜಂಬೂ ಸವಾರಿಗೆ ನಾಲ್ಕೈದು ದಿನ ಬಾಕಿ ಇರುವಾಗ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್ ಆಗುತ್ತಿದ್ದವು. ಹೀಗಾಗಿ ದಸರಾ ಟಿಕೆಟ್‌ಗಳನ್ನು ಮುನ್ನವೇ ಬಿಡುಗಡೆ ಮಾಡಬೇಕೆಂದು ಪ್ರವಾಸಿಗರು ಹಾಗೂ ಸಾರ್ವಜನಿಕರು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 25 ದಿನಗಳ ಮುಂಚಿತವೇ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದ್ದು, ಪ್ರತಿನಿತ್ಯ ಸೀಮಿತ ಟಿಕೆಟ್ ಬಿಡುಗಡೆಗೆ ನಿರ್ಧರಿಸಿದೆ.
ಸೆ.22 ರಿಂದ ಅ.2 ರವರೆಗೆ ದಸರಾ ನಡೆಯಲಿದ್ದು, ಜಂಬೂ ಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ಅನುಕೂಲವಾಗಲೆಂದು ಟಿಕೆಟ್ ಹಾಗೂ ಗೋಲ್‌್ಡಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.
ಪಂಜಿನ ಕವಾಯತು ವೀಕ್ಷಣೆಗೆ 1,500 ರೂ., ಜಂಬೂ ಸವಾರಿಗೆ 3,500 ರೂ. ಹಾಗೂ ಗೋಲ್ಡ್ ಕಾರ್ಡ್‌ಗೆ 6,500 ರೂ. ದರ ನಿಗದಿ ಮಾಡಲಾಗಿದೆ. ಟಿಕೆಟ್ ಪಡೆಯಲು ಮೈಸೂರು ದಸರಾದ ಅಧಿಕೃತ ಜಾಲತಾಣ https://mysoredasara.govin/ ದಲ್ಲಿ ಸಂಪರ್ಕಿಸಬಹುದೆಂದು ಜಿಲ್ಲಾಡಳಿತ ತಿಳಿಸಿದೆ.