ಬೆಂಗಳೂರು,ಅ.2- ನಾಳೆಯಿಂದ ರಾಜ್ಯದ ಎಲ್ಲಾ ಶಾಲಾಗಳಿಗೆ ದಸರಾ ರಜೆ ಘೋಷಿಸಲಾಗಿದೆ. ಸರ್ಕಾರಿ ಆದೇಶದಲ್ಲಿ ತಿಳಿಸಿರುವಂತೆ ಅಕ್ಟೋಬರ್ 3ರಿಂದ ಅಕ್ಟೋಬರ್ 20ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದ್ದು, ಒಟ್ಟು 17 ದಿನ ವಿದ್ಯಾರ್ಥಿಗಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ.
2024-25ನೇ ಶೈಕ್ಷಣಿಕ ಸಾಲಿನ ದಸರಾ ರಜೆ ಅಕ್ಟೋಬರ್ 3 ರಿಂದ 20 ರವರೆಗೆ ಇರಲಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇದ್ದು, ಕಾರ್ಯಕ್ರಮದ ನಂತರ ರಜೆಗಳು ಆರಂಭವಾಗಲಿದೆ. ಇನ್ನು ದಸರಾ ರಜೆ ಬಳಿಕ ಅಕ್ಟೋಬರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ಶಾಲೆ ನಡೆಯಲಿದೆ.
2024- 2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿತ್ತು. ಅದರ ನಿಯಮಾನುಸಾರದಂತೆ ರಜೆಗಳು ಘೋಷಣೆಯಾಗಿವೆ.ಇನ್ನು, ಕ್ರಿಸ್ ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ ವ್ಯಾಪ್ತಿಯ ಜಿಲ್ಲಾ ಉಪ ನಿರ್ದೇಶಕರು ಅವರಿಗೆ ಸಲ್ಲಿಸಿದಲ್ಲಿ ಈ ಬಗ್ಗೆ ಆಯಾ ಉಪನಿರ್ದೇಶಕರು ಪರಿಶೀಲಿಸಿ ನಿರ್ಧರಿಸಲು ಸೂಚನೆ ನೀಡಲಾಗಿದೆ.
ಡಿಸೆಂಬರ್ ತಿಂಗಳಿನಲ್ಲಿ ನೀಡುವ ಕ್ರಿಸ್‌ಮಸ್ ರಜಾ ಅವಧಿಯನ್ನು ಅಕ್ಟೋಬರ್ ತಿಂಗಳ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಿಕೊಳ್ಳಲು ಕ್ರಮವಹಿಸಲು ಸೂಚನೆ ನೀಡಲಾಗಿದೆ.ಉಳಿದಂತೆ ನಿಗದಿತ ಶೈಕ್ಷಣಿಕ ಕರ್ತವ್ಯದ ಅವಧಿಗಳು ಕಡಿಮೆಯಾಗದಂತೆ ಅನಿರೀಕ್ಷಿತ ಕಾರಣಗಳಿಂದಾಗಿ ಶಾಲೆಗೆ ರಜೆ ಘೋಷಣೆಯಾದಲ್ಲಿ ಆ ಅವಧಿಯ ಶಾಲಾ ಕರ್ತವ್ಯದ ದಿನಗಳನ್ನು ಮುಂದಿನ ರಜಾ ದಿನಗಳಲ್ಲಿ ಪೂರ್ಣ ದಿನ ಶಾಲೆಗಳನ್ನ ನಡೆಸಿ ಶಾಲಾ ಕರ್ತವ್ಯದ ದಿನಗಳನ್ನ ಸರಿದೂಗಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ದಸರಾ ರಜೆ ಹಿನ್ನೆಲೆಯಲ್ಲಿ ಪಟ್ಟಣ ಪ್ರದೇಶದಲ್ಲಿ ಇರುವವರು ರಜೆ ಅವಧಿಯನ್ನು ಕಳೆಯಲು ಗ್ರಾಮಗಳಿಗೆ ತೆರಳಿ ಕಳೆಯುವ ಸಾಮಾನ್ಯ ಸಂಗತಿಯಾಗಿದೆ. ಆದರೆ ರಾಜ್ಯದಲ್ಲಿ ದಸರಾ ರಜೆಗಳ ಬಳಿಕ ಮತ್ತೆ ಶಿಕ್ಷಣ ಸಂಸ್ಥೆಗಳಿಗೆ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ರಜೆ ಇರಲಿದ್ದು, ಆ ಬಳಿಕ ಜನವರಿಯಲ್ಲಿ ಸಂಕ್ರಾಂತಿ ರಜೆಗಳಿ ಸಿಗಲಿದೆ. ಇಂದು ಎಲ್ಲಾ ಶಾಲೆಗಳಲ್ಲೂ ಗಾಂಧಿ ಜಯಂತಿ ಆಚರಿಸಲಾಗಿದ್ದು, ನಾಳೆಯಿಂದ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಕೇವಲ 11 ದಿನಗಳು ತರಗತಿಗಳು ನಡೆಯಲಿವೆ.