ಮೈಸೂರು,ಆ.24- ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆಗೆ ಇಂದು ತೂಕ ಪರಿಶೀಲನೆ ಮಾಡಲಾಗಿದ್ದು, ಕ್ಯಾಪ್ಟನ್ ಅಭಿಮನ್ಯು ಬಲುಭಾರ ಹೊಂದಿದ್ದಾನೆ. ದಸರಾ ಹಿನ್ನೆಲೆಯಲ್ಲಿ ಆ.21 ರಂದು ವೀರನಹೊಸಹಳ್ಳಿ ಕ್ಯಾಂಪ್‌ನಿಂದ ನಗರಕ್ಕೆ ಆಗಮಿಸಿದ ಗಜಪಡೆ ನಿನ್ನೆ ಅದ್ಧೂರಿಯಾಗಿ ಅರಮನೆ ಆವರಣ ಪ್ರವೇಶಿಸಿದ್ದು, ಇಂದು ಆನೆಗಳ ತೂಕ ಪರಿಶೀಲಿಸಲಾಯಿತು.
ಯಾವ ಆನೆ, ಎಷ್ಟೆಷ್ಟು ತೂಕ :
ಅಭಿಮನ್ಯು 5,560 ಕೆ.ಜಿ., ಭೀಮ 4,945 ಕೆ.ಜಿ., ಏಕಲವ್ಯ 4,730 ಕೆ.ಜಿ., ಕಂಜನ್ 4,515 ಕೆ.ಜಿ., ಧನಂಜಯ 5,155 ಕೆ.ಜಿ., ಲಕ್ಷ್ಮಿ 2,480 ಕೆ.ಜಿ., ವರಲಕ್ಷ್ಮಿ 3,495 ಕೆ.ಜಿ., ರೋಹಿತ 3,625 ಕೆ.ಜಿ., ಗೋಪಿ 4,970 ಕೆ.ಜಿ. ಹೊಂದಿದ್ದು, ಇದರಲ್ಲಿ ಕ್ಯಾಪ್ಟನ್ ಅಭಿಮನ್ಯು ಬಲು ಭಾರ ಹೊಂದಿದ್ದಾನೆ.
ಆನೆಗಳ ಆರೋಗ್ಯದ ಮೇಲೆ ಗಮನ ಹರಿಸಲಾಗಿದ್ದು, ತೂಕದ ಮೇಲೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದ್ದು, ನಾಳೆಯಿಂದಲೇ ಗಜಪಡೆಗೆ ತಾಲೀಮು ಪ್ರಾರಂಭವಾಗಲಿದೆ ಎಂದು ಬಿಸಿಎಫ್‌ಒ ಡಾ.ಪ್ರಭುಗೌಡ ತಿಳಿಸಿದ್ದಾರೆ.
ಬೆಳಿಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಯಲಿದ್ದು, ನಗರದ ಗದ್ದಲಗಳಿಗೆ ಬೆಚ್ಚಿ ಬೀಳದಂತೆ ತರಬೇತಿ ನೀಡುವುದೇ ತಾಲೀಮಿನ ಉದ್ದೇಶವಾಗಿದೆ.
ಮೊದಲ ಬಾರಿಗೆ ಏಕಲವ್ಯ ದಸರಾ ಉತ್ಸವದಲ್ಲಿ ಭಾಗಿಯಾಗುತ್ತಿದ್ದು, ಮುಂಬರುವ ವರ್ಷಗಳಲ್ಲಿ ಅಂಬಾರಿ ಹೊರುವ ಭಾರ ಅವನ ಹೆಗಲಿಗೆ ಬರುವುದರಿಂದ ಈಗಿನಿಂದಲೇ ತರಬೇತಿಯನ್ನು ಮಾವುತರು ಮತ್ತು ಕಾವಾಡಿಗರು ಆರಂಭಿಸಿದಂತಿದೆ.