Saturday, August 30, 2025
Homeರಾಜ್ಯದಸರಾ ಮಹೋತ್ಸವ : ಸೆ.28 ಮತ್ತು 29ರಂದು ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ

ದಸರಾ ಮಹೋತ್ಸವ : ಸೆ.28 ಮತ್ತು 29ರಂದು ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ

Dasara Mahotsav: Drone show to be held on September 28 and 29

ಮೈಸೂರು,ಆ.30- ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನವನ್ನು ಸೆ.28 ಮತ್ತು 29ರಂದು ನಡೆಸಲು ತೀರ್ಮಾನಿಸಿದ್ದು, ವಿದ್ಯುತ್‌ ದೀಪಾಲಂಕಾರ, ಡ್ರೋನ್‌ ಯಶಸ್ವಿಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದ್ದಾರೆ.

ದಸರಾ ಮಹೋತ್ಸವದ ವಿದ್ಯುತ್‌ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ನಡೆದ ಪೂರ್ವಭಾವಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಈ ಬಾರಿ ಏರ್‌ ಶೋ ಸಹ ನಡೆಯಲಿದೆ. ಇದರ ನಡುವೆ ಡ್ರೋನ್‌ ಶೋ ನಡೆಸಬೇಕಿದೆ. ಅಲ್ಲದೆ, ಪಂಜಿನ ಕವಾಯತು ಕಾರ್ಯಕ್ರಮದ ತಾಲೀಮು ಸಹ ನಡೆಯುವ ಹಿನ್ನೆಲೆಯಲ್ಲಿ ಯಾವುದೇ ಅಡಚಣೆ ಆಗದಂತೆ ಮೂರು ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೆ.28 ಮತ್ತು 29ರಂದು ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ ನಡೆಸುವುದು ಸೂಕ್ತವಾದ ದಿನಾಂಕವಾಗಿದೆ ಎಂದರು.

ಡ್ರೋನ್‌ ಶೋ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅಗತ್ಯವಿರುವ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಎಂಡಿಎ ವತಿಯಿಂದ ಮಾಡಿಕೊಳ್ಳಬೇಕಿದೆ. ಇದರೊಂದಿಗೆ ಸಂಗೀತ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಂಡಿಎ ವತಿಯಿಂದ ನಡೆಸಲು ಕ್ರಮ ವಹಿಸಬೇಕಿದೆ ಎಂದು ತಿಳಿಸಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್‌ ರಾಜು ಮಾತನಾಡಿ, ದಸರಾ ಮಹೋತ್ಸವದ ಅಂಗವಾಗಿ ನಗರದ ಪ್ರಮುಖ ವೃತ್ತ, ರಸ್ತೆಗಳು ಹಾಗೂ ಇನ್ನಿತರ ಸ್ಥಳಗಳಲ್ಲಿ ಮಾಡಲಾಗುವ ದಸರಾ ದೀಪಾಲಂಕಾರದ ವಿನ್ಯಾಸ, ವಿವಿಧ ಬಗೆಯ ಕಲಾಕೃತಿಗಳನ್ನು ನಿರ್ಮಿಸಿರುವ ಕುರಿತಂತೆ ಮಾಹಿತಿ ನೀಡಿದರು.

ಸೆ.28 ಮತ್ತು 29ರಂದು ನಡೆಯುವ ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ ಹಾಗೂ ಅ.1 ಮತ್ತು 2ರಂದು ಡ್ರೋನ್‌ ಶೋ ಪ್ರಮುಖ ಪ್ರದರ್ಶನ ನಡೆಯಲಿದೆ. ಡ್ರೋನ್‌ ಶೋ ಜತೆಗೆ ಖ್ಯಾತ ಗಾಯಕರಿಂದ ಸಂಗೀತ ಸಂಜೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಎಂಡಿಎ ಆಯುಕ್ತ ರಕ್ಷಿತ್‌, ನಿಗಮದ ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್‌, ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್‌ ಸುನೀಲ್‌‍, ಪ್ರಧಾನ ವ್ಯವಸ್ಥಾಪಕ ಎಲ್‌‍.ಲೋಕೇಶ್‌ ಸೇರಿದಂತೆ ಪ್ರಮುಖ ಅಧಿಕಾರಿಗಳು ಇದ್ದರು.

RELATED ARTICLES

Latest News