ಬೆಂಗಳೂರು,ಅ.30-ಕೆಲಸ ನೀಡಿ ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದ ಮಾಲೀಕರಿಗೆ ಮಂಕುಬೂದಿ ಎರಚಿ ಕಳ್ಳತನ ಮಾಡಿದ್ದ ಮನೆಗೆಲಸದಾಕೆ ಆನ್‌ಲೈನ್ ಚಟಕ್ಕೆ ಬಿದ್ದು ಈ ಕೃತ್ಯವೆಸಗಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಮನೆಗೆಲಸದಾಕೆ ಮಂಗಳ (32) ಟಿ.ನರಸೀಪುರ ತಾಲ್ಲೂಕಿನವರಾಗಿದ್ದು, ಆನ್‌ಲೈನ್ ಬೆಟ್ಟಿಂಗ್‌ಗಾಗಿ ಹಣ ಹೊಂದಿಸಲು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಮಾಲೀಕರ ಕಣ್ತಪ್ಪಿಸಿ ಆಗಾಗ್ಗೆ ಆಭರಣಗಳನ್ನು ಕಳ್ಳತನ ಮಾಡತ್ತಿದ್ದಳು.
ಈಕೆಯನ್ನು ಮನೆ ಮಾಲೀಕರಾದ ಆಶಾ ಅವರು ತುಂಬ ನಂಬಿದ್ದರು. ಆಕೇಗಾಗಿ ಕೋಟಿ ಮೌಲ್ಯದ ಮನೆಯನ್ನು ಆಕೆ ಹೆಸರಿಗೆ ವಿಲ್ ಮಾಡಿದ್ದರು. ಹೀಗಿದ್ದರೂ ತನ್ನ ದುರಾಸೆಗಾಗಿ ಆಭರಣ ಕದ್ದು ಇದೀಗ ಜೈಲು ಪಾಲಾಗಿದ್ದಾಳೆ.
ವಿವರ:ಜೆಪಿನಗರ 2ನೇ ಹಂತದಲ್ಲಿ ಆಶಾ ಜಾಧವ್ ಎಂಬುವವರು ವಾಸವಾಗಿದ್ದು, ಅವರ ತಾಯಿಗೆ ಅನಾರೋಗ್ಯ ಕಾರಣ ಅವರನ್ನು ನೋಡಿಕೊಳ್ಳಲು 15 ವರ್ಷದ ಹಿಂದೆ ಕೇರ್‌ಟೇಕರ್ ಆಗಿ ಟಿ.ನರಸೀಪುರ ತಾಲ್ಲೂಕಿನವರಾದ ಮಂಗಳ (32) ಳನ್ನು ನೇಮಿಸಿಕೊಂಡಿದ್ದರು.
ಆಶಾ ಅವರಿಗೆ ಮಕ್ಕಳಿರಲಿಲ್ಲ. ಅವರ ಪತಿಯೂ ಮೃತಪಟ್ಟಿದ್ದಾರೆ. ಜೆಪಿ ನಗರದಲ್ಲಿ ಆಶಾ ಅವರು ಕೋಟ್ಯಾಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಇತ್ತೀಚೆಗೆ ಆಶಾ ಅವರ ತಾಯಿಯೂ ಮೃತಪಟ್ಟಿದ್ದಾರೆ. ಹಾಗಾಗಿ ಮಂಗಳಾಳನ್ನು ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದರು. ಆದರೆ ಆಕೆ ಆ ವಿಶ್ವಾಸವನ್ನು ಉಳಸಿಕೊಳ್ಳದೆ ಬಾಯ್‌ಫ್ರೆಂಡ್ ಜೊತೆ ಪಬ್, ಪಾರ್ಟಿಯೆಂದು ಸುತ್ತಾಡುತ್ತಾ ಅದಕ್ಕಾಗಿ ಲಕ್ಷಾಂತರ ಹಣ ಸಾಲ ಮಾಡಿಕೊಂಡಿದ್ದಳು.ಸಾಲದ ವಿಷಯ ತಿಳಿದು ಮನೆ ಮಾಲೀಕರಾದ ಆಶಾ ಅವರು 40 ಲಕ್ಷ ರೂ. ಸಾಲವನ್ನು ತೀರಿಸಿದ್ದರು.
ಅಲ್ಲದೇ ಕೋಟಿ ಮೌಲ್ಯದ ಮನೆಯನ್ನು ಆಕೆಯ ಹೆಸರಿಗೆ ಬರೆದಿದ್ದರು. ಆನ್‌ಲೈನ್ ಬೆಟ್ಟಿಂಗ್‌ಗಾಗಿ ಆ ಮನೆಯನ್ನೂ ಸಹ ಮಾರಿ ಮಂಗಳ ಹಣ ಕಳೆದುಕೊಂಡಿದ್ದರೂ ಆಶಾ ಅವರು ತಮ ಮನೆಯಲ್ಲಿಯೇ ಆಕೆಯನ್ನು ಸಾಕಿಕೊಂಡಿದ್ದರು.
ಪ್ರತಿವರ್ಷ ಆಕೆಯ ಹುಟ್ಟುಹಬ್ಬಕ್ಕೆ ಆಶಾ ಅವರು ವಿದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆಕೆಯ ಮದುವೆ ಮಾಡಲು ಸಹ ಹುಡುಗನನ್ನು ಹುಡುಕುತ್ತಿದ್ದರು.ಇಷ್ಟೆಲ್ಲಾ ಸಹಾಯ ಮಾಡಿದ್ದರೂ ಸಹ ಆನ್‌ಲೈನ್ ಬೆಟ್ಟಿಂಗ್ ಬಿಟ್ಟಿರಲಿಲ್ಲ. ಅದಕ್ಕಾಗಿ ಆಭರಣ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದಾಳೆ.
