ಚನ್ನಗಿರಿ,ಅ.10- ಕಾರಿನಲ್ಲಿ ತೆರಳುತ್ತಿದ್ದ ಅಡಿಕೆ ವ್ಯಾಪಾರಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಬೆದರಿಸಿ 17.24 ಲಕ್ಷ ರೂ.ದರೋಡೆ ಮಾಡಿದ್ದ 7 ಜನ ಆರೋಪಿಗಳನ್ನು ಸಂತೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಚನ್ನಗಿರಿಯ ಮಹಮದ್ ಇನಾಯತ್ (21), ಉಮರ್ ಫಾರೂಕ್ (21) ಶಾಹಿದ್ ಖಾಜಿ (24), ಮೈಸೂರ ನಿವಾಸಿಗಳಾದ ಖುರಂ ಖಾನ್ (25), ಸೈಯದ್ ಸೈಫುಲ್ಲಾ (24), ಖಾಷಿಫ್ ಅಹಮದ್(25) ಹಾಗೂ ತುಮಕೂರು ನಿವಾಸಿ ಖುರಂ ಖಾನ್ (25) ಎಂದು ಗುರುತಿಸಲಾಗಿದೆ.
ಆರೋಪಿಗಳು ಸೆ.30 ರಂದು ಚನ್ನಗಿರಿಯ ಜೋಳದಾಳ ಬಳಿ ಅಡಿಕೆ ವ್ಯಾಪಾರಿ ಅಶೋಕ್ ಎಂಬವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಅವರ ಬಳಿ ಇದ್ದ 17.24 ಲಕ್ಷ ರೂ. ದರೋಡೆ ಮಾಡಿದ್ದರು ಈ ವೇಳೆ ಬಳಿಕ ಕಾರಿನ ಕೀ ಕಸಿದುಕೊಂಡು ಪರಾರಿಯಾಗಿದ್ದರು.
ನಂತರ ಅಶೋಕ್ ಅವರು ಕೃತ್ಯದ ಬಗ್ಗೆ ಸಂತೆಬೆನ್ನೂರು ಪೊಲೀಸರಿಗೆ ದೂರು ನೀಡಿದ ನಂತರ ಡಕಾಯಿತಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.ಈ ವೇಳೆ ಅಡಿಕೆ ಕೊಡಿಸುವ ಮಧ್ಯಸ್ಥಿಕೆ ವಹಿಸಿದ್ದ ಮಹಮದ್ ಇನಾಯತುಲ್ಲಾ ಎಂಬಾತನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ . ಆರೋಪಿಗಳಿಂದ 7.37 ಲಕ್ಷ ರೂ. ನಗದು, 2 ಕಾರು, 2 ಬೈಕ್ , 9 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ.